

ಚಿತ್ರದುರ್ಗ; ಕೋಟೆನಗರಿಯಲ್ಲಿ ಆಗಸ್ಟ್ ತಿಂಗಳಲ್ಲಿ ಪರಿಶಿಷ್ಟ ಜಾತಿ ಒಳಗೊಂಡು ಸಹೋದರತ್ವ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಗುರುವಾರ ವಿವಿಧ ಸಮುದಾಯಗಳ ಮುಖಂಡರೊಂದಿಗೆ ಚರ್ಚಿಸಿ ಮಾತನಾಡಿ, ಸಹೋದರ ಸಮುದಾಯಗಳು ಸಂಘಟಿತರಾಗಬೇಕು. ಒಗ್ಗಟ್ಟಿನಿಂದ ಮುನ್ನಡೆಯಬೇಕು, ಅಭಿವೃದ್ಧಿ ಪಥದಲ್ಲಿ ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯಬೇಕು ಎಂಬ ದೃಷ್ಟಿಯಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.
ಮುಖಂಡ ಪಾಂಡುರಂಗಸ್ವಾಮಿ ಮಾತನಾಡಿ, ಒಳ ಮೀಸಲಾತಿ ಬೆಂಬಲಿಸಿ ದಲಿತ ಸಂಘಟನೆಗಳ ಒಕ್ಕೂಟ ರಚನೆ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಯಾವುದೇ ಸ್ವಾರ್ಥವಾಗಲಿ, ದುರುದ್ದೇಶವಾಗಲಿ ಇಲ್ಲ ಎಂದು ಹೇಳಿದರು.
ಛಲವಾದಿ ಎನ್.ತಿಪ್ಪೇಸ್ವಾಮಿ ಮಾತನಾಡಿ, ಎಸ್ಸಿ ಸಮುದಾಯದ ಎಲ್ಲ ಸ್ವಾಮೀಜಿಗಳು ನೇತೃತ್ವ ವಹಿಸಲಿದ್ದಾರೆ. ಯಾರನ್ನು ಹೊರಗಿಟ್ಟು ಕಾರ್ಯಕ್ರಮ ಮಾಡುವ ಉದ್ದೇಶವಿಲ್ಲ. ಕೆ.ಎಚ್.ಮುನಿಯಪ್ಪ, ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಪ್ರಿಯಾಂಕ ಖರ್ಗೆ, ಆರ್.ವಿ.ತಿಮ್ಲಾಪುರ ಸೇರಿ ಎಲ್ಲ ಸಚಿವರನ್ನು ಸನ್ಮಾನಿಸಲು ತೀರ್ಮಾನಿಸಿದ್ದು, ಎಲ್ಲರೂ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಮುಖಂಡರಾದ ಬಿರಾವರ ಪ್ರಕಾಶ್, ನಲ್ಲಿಕಟ್ಟೆ ನಾಗರಾಜ್, ಅವಿನಾಶ್ ತಾಳಿಕೆರೆ, ಮಂಜುನಾಥ್, ಓಂಕಾರಮೂರ್ತಿ, ಕೆಂಚಣ್ಣ, ಪಂಚಾಕ್ಷರಿ, ರಾಮಕೃಷ್ಣ, ಹೊಳೆಯಪ್ಪ ಸಾಕ್ಯ, ಮೂಡಲಗಿರಿ, ನಾಗಭೂಷಣ್ ಇತರರಿದ್ದರು.