ಆಗಸ್ಟ್ ಬಳಿಕ ಶಾಲೆ ಆರಂಭವಾಗಲಿ

13sdp1a
Published on

ಸಿದ್ದಾಪುರ: ಶಾಲೆಗಳನ್ನು ಆರಂಭಿಸುವುದಕ್ಕೆ ಅಭಿಪ್ರಾಯ ಸಂಗ್ರಹಿಸುವಂತೆ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ. ಹೀಗಾಗಿ ತಾಲೂಕಿನ ಎಲ್ಲ ಶಾಲೆಗಳಲ್ಲಿ

ಎಸ್​ಡಿಎಂಸಿ, ಪಾಲಕ- ಪೋಷಕರ, ಜನಪ್ರತಿನಿಧಿಗಳ, ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹಣೆ ನಡೆಯುತ್ತಿದೆ. ಆಗಸ್ಟ್ ನಂತರವೇ ಶಾಲೆ ಪ್ರಾರಂಭಿಸುವಂತೆ ಪಾಲಕರು ಒತ್ತಾಯಿಸಿದ್ದಾರೆ.

ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಕರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳು ವಾಹನವನ್ನು ಅವಲಂಬಿಸಿಯೇ ಶಾಲೆಗೆ ಬರಬೇಕಾಗಿದೆ. ಅಲ್ಲದೆ, ವಾಹನದಲ್ಲಿ ವಿವಿಧ ಊರಿನವರು ಇರುವುದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕರೊನಾ ಹತೋಟಿಗೆ ಬಂದ ನಂತರವೇ ಎಲ್ಲ ಶಾಲಾ- ಕಾಲೇಜುಗಳನ್ನು ಪ್ರಾರಂಭಿಸಬೇಕು ಎಂಬುದಾಗಿ ಶೇ. 50ರಷ್ಟು ಜನರು ಅಭಿಪ್ರಾಯ ತಿಳಿಸಿದ್ದಾರೆ. ಇನ್ನುಳಿದ ಶೇ. 50ರಷ್ಟು ಜನ ಆಗಸ್ಟ್ ನಂತರ ಸುರಕ್ಷತೆ ಕ್ರಮಗಳನ್ನು ಕೈಗೊಂಡು ಸರ್ಕಾರ ಶಾಲೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರಕ್ಕೆ ಮಾಹಿತಿ: ಶಾಲೆ ಆರಂಭಿಸುವ ಕುರಿತು ಅಭಿಪ್ರಾಯ ಸಂಗ್ರಹ ಸಭೆ ಪ್ರತಿ ಶಾಲೆಯಲ್ಲಿ ಜೂ. 20ರವರೆಗೆ ನಡೆಯಲಿದೆ. ಇಲ್ಲಿ ಕೈಗೊಂಡ ನಿರ್ಣಯವನ್ನು ಶಾಲಾ ಮುಖ್ಯಶಿಕ್ಷಕರು ಆನ್​ಲೈನ್​ನಲ್ಲಿ ಎಸ್​ಎಟಿಎಸ್ ಸಾಫ್ಟ್​ವೇರ್ ಮೂಲಕ ಭರ್ತಿ ಮಾಡಿ ಸರ್ಕಾರಕ್ಕೆ ಮಾಹಿತಿ ನೀಡುತ್ತಾರೆ. ಸರ್ಕಾರ ಎಲ್ಲ ಶಾಲೆಗಳ ಮಾಹಿತಿಯನ್ನು ಕ್ರೋಡೀಕರಿಸಿ ಶಾಲೆಯನ್ನು ಎಂದಿನಿಂದ ಪ್ರಾರಂಭಿಸಬೇಕು ಎನ್ನುವುದರ ಕುರಿತು ನಿರ್ಣಯ ಕೈಗೊಳ್ಳಲಿದೆ.

ಶಾಲೆ ಆರಂಭಿಸುವ ಕುರಿತು ಎಸ್​ಡಿಎಂಸಿ, ಪಾಲಕ- ಪೋಷಕರ, ಶಿಕ್ಷಣ ತಜ್ಞರ ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು. ಈ ಅಭಿಪ್ರಾಯವನ್ನು ಕ್ರೋಡೀಕರಿಸಿ ಸರ್ಕಾರ ನಿರ್ಣಯ ಕೈಗೊಳ್ಳಲಿದೆ. | ಸದಾನಂದ ಸ್ವಾಮಿ ಬಿಇಒ ಸಿದ್ದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net