ಆಗಸ್ಟ್ ಅಂತ್ಯದೊಳಗೆ ನೀರು ಪೂರೈಕೆ

17 kem 1
Published on

ಕೆಂಭಾವಿ: ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಕೃಷ್ಣಾ ಕಾಲುವೆ ಪಂಪ್ ಹೌಸ್ ಮತ್ತು ಶುದ್ಧೀಕರಣ ಘಟಕಕ್ಕೆ ಮಂಗಳವಾರ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.

ನಗರ ಕುಡಿಯುವ ನೀರು ಸರಬರಾಜು ಮಂಡಳಿಯ ಎಇಇ ಶಂಕರಗೌಡ ಮತ್ತು ಕೆಕೆಆರ್‌ಡಿಬಿ ಇಂಜಿನಿಯರ್ ಸುನೀಲಕುಮಾರ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಈ ವೇಳೆ ಕುಡಿಯುವ ನೀರಿನ ಕಾಮಗಾರಿ ಕುರಿತು ಕೆಕೆಆರ್‌ಡಿಬಿ ಅಭಿಯಂತರರಿಗೆ ಶಂಕರಗೌಡ ಅವರು ಸಮಗ್ರ ಮಾಹಿತಿ ನೀಡಿದರು. ನಂತರ ಮಾತನಾಡಿದ ಅವರು, ಈಗಾಗಲೇ ಪಟ್ಟಣಕ್ಕೆ ತಾತ್ಕಾಲಿಕವಾಗಿ ಕಾಲುವೆಯಿಂದ ನೀರು ಶುದ್ಧೀಕರಿಸಿ ಪೂರೈಕೆ ಮಾಡಲಾಗುತ್ತಿದೆ. ಆದರೆ ಕಾಲುವೆ ನೀರು ಬಂದ್ ಆದ ಕಾರಣ ಇದನ್ನು ಸ್ಥಗಿತಗೊಳಿಸಲಾಗಿದೆ ಎಂದರು.

ಅಮೃತ-೨ ಯೋಜನೆಯಡಿಯಲ್ಲಿ ನಿರಂತರ ನೀರು ಒದಗಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ಶೇ.೮೦ ಕೆಲಸ ಪೂರ್ಣಗೊಂಡಿದೆ. ಕೆಲ ವಾರ್ಡ್ಗಳಲ್ಲಿ ತಾಂತ್ರಿಕ ಕಾರಣಗಳಿಂದ ನಲ್ಲಿ ಜೋಡಣೆಯ ಕಾರ್ಯ ಸ್ಥಗಿತಗೊಂಡಿದ್ದು ಅವು ಕೂಡ ಶೀಘ್ರ ಬಗೆಹರಿಸಿ ಆಗಸ್ಟ್ ಅಂತ್ಯದೊಳಗೆ ನಿರಂತರ ನೀರು ಪೂರೈಕೆ ಮಾಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ನಂತರ ಕೆಕೆಆರ್‌ಡಿಬಿಯಿಂದ ಒದಗಿಸಲಾದ ಅನುದಾನದ ಬಳಕೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಸುನೀಲಕುಮಾರ, ಕೃಷ್ಣಾ ಕಾಲುವೆ ಬಳಿ ಇರುವ ಕಚ್ಚಾ ನೀರಿನ ಪಂಪ್‌ಹೌಸ್, ಕಾಲುವೆಯಿಂದ ಹಿಲ್‌ಟಾಪ್ ಕಾಲನಿವರೆಗೆ ಇರುವ ಪೈಪ್‌ಲೈನ್, ವಿದ್ಯುತ್ ಘಟಕ, ಶುದ್ಧ ಕುಡಿಯುವ ನೀರಿನ ಘಟಕ ಸೇರಿ ಹಲವು ಕಾಮಗಾರಿ ಪರಿಶೀಲಿಸಿದರು. ಶಫೀಕ್ ದಫೇದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net