

ಬಳ್ಳಾರಿ : ಕೇಂದ್ರ ಸರ್ಕಾರ ರೈತರ ಹಕ್ಕುಗಳ ದಮನ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಜಿಲ್ಲೆಯಲ್ಲಿ ಆ.15 ರಂದು ಟ್ಯಾಕ್ಟರ್ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘಟನೆ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ದೇಶಾದ್ಯಂತ ಕರೆ ನೀಡಿದ ಹಿನ್ನಲೆ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ. ಡಾ. ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ದೇಶಾದ್ಯಂತ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು. ಕೃಷಿ ಬಳಕೆ ಟ್ಯಾಕ್ಟರ್‌ಗಳಿಗೆ ಡೀಸೆಲ್ ಸಬ್ಸಿಡಿ ನೀಡಬೇಕು. ಕೃಷಿ ಉಪಕರಣಗಳ ಮೇಲಿನ ಜಿಎಸ್‌ಟಿ ರದ್ದು ಮಾಡಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಭತ್ತ ಬೆಳೆಯುವ ರೈತರ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರ ಕೂಡಲೇ ರಫ್ತು ನಿಷೇಧ ಆದೇಶ ವಾಪಸ್ ಪಡೆಯಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಲಿಂಕ್ ಜೋಡಣೆ ಮಾಡುವುದು ಕೈ ಬಿಡಬೇಕು. ಇದರಲ್ಲಿ ಉಚಿತ ವಿದ್ಯುತ್ ಸಬ್ಸಿಡಿ ನಿಲ್ಲಿಸುವ ಹುನ್ನಾರವಿದ್ದು, ಆದ್ದರಿಂದ, ಯಾವುದೇ ರೈತರು ಆಧಾರ್ ಲಿಂಕ್ ಮಾಡಬಾರದು ಎಂದು ಮನವಿ ಮಾಡಿದರು. ಸಂಘದ ಪ್ರಮುಖರಾದ ಶರಣಪ್ಪ ದೂಡ್ಡಮನಿ ,ಲೇಪಾಕ್ಷಿ ಅಸುಂಡಿ, ಬಸವರಾಜ ಸ್ವಾಮಿ , ಜಿ.ವಿ.ಲಕ್ಷ್ಮಿದೇವಿ. ಕೊಟ್ರೆಶ್ ಚೌದರಿ, ಮೇಟಿ ನಾಗರಾಜ್ಗೌಡ ಇದ್ದರು.