

ಬೈಲಹೊಂಗಲ: ಪಟ್ಟಣದ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಅಕ್ರಮವಾಗಿ ಆಕ್ಸಿಜನ್ ಸಿಲಿಂಡರ್ ಮಾರಾಟ ಮಾಡಲಾಗುತ್ತಿದ್ದು, ಅದನ್ನು ತಡೆದು ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಆಕ್ಸಿಜನ್ ಸಿಲಿಂಡರ್ ದೊರೆಯುವಂತೆ ಕ್ರಮವಹಿಸಬೇಕು.
ಬೇರೆ, ಜಿಲ್ಲೆ, ತಾಲೂಕುಗಳಿಗೆ ಹೆಚ್ಚಿನ ದರಕ್ಕೆ ಆಕ್ಸಿಜನ್ ಸಿಲೆಂಡರ್ ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಸದಸ್ಯರು ಉಪವಿಭಾಗಾಧಿಕಾರಿ ಶಶಿಧರ ಬಗಲಿ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ಡಾ.ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಆಕ್ಸಿಜನ್ ಲಭ್ಯವಾಗದೆ ಬಡ ರೋಗಿಗಳು ಸಾವನ್ನಪ್ಪಿದ್ದಾರೆ. ಇದು ಪತ್ರಿಕೆಗಳಲ್ಲಿ ವರದಿಯಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್‌ಗಳು ಸಾಕಷ್ಟಿದ್ದು, ಕೆಲವರು ರಾಜಾರೋಷವಾಗಿ 15 ರಿಂದ 30 ಸಾವಿರ ರೂ. ಗಳಿಗೆ ಆಕ್ಸಿಜನ್ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರೆ. ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ. ಅಧಿಕಾರಿಗಳು ತುರ್ತು ಸ್ಪಂದಿಸಿ ಬಡವರ ಪ್ರಾಣ ಉಳಿಸುವುದರ ಜತೆಗೆ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ರಾಯಣ್ಣ ಸ್ಮರಣೋತ್ಸವ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಮಾತನಾಡಿ, ಆಕ್ಸಿಜನ್ ಸಿಲಿಂಡರ್ ಅನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿಗೆ ಸಂಗ್ರಹ ಮಾಡಿ ಬಡ ಜನತೆಗೆ ಸಿಗುವಂತೆ ಕಾಳಜಿವಹಿಸಬೇಕು ಎಂದು ಆಗ್ರಹಿಸಿದರು.
ರವಿಕಿರಣ ಯಾತಗೇರಿ, ಈರಣ್ಣ ಕಾಡೇಶನವರ, ಸಂಗಮೇಶ ರೇಶ್ಮಿ ಇತರರು ಇದ್ದರು.