ಆಕ್ಸಿಜನ್ ಸಂತ್ರಸ್ತರಿಗೆ ಉದ್ಯೋಗಕ್ಕೆ ಆಗ್ರಹ

Ward-12 (abrar ahamad) SDPI
Published on

ಚಾಮರಾಜನಗರ : ಜಿಲ್ಲೆಯಲ್ಲಿ ನಿಗದಿಯಾಗಿರುವ ಸಚಿವ ಸಂಪುಟ ಸಭೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಜಾರಿಗೊಳಿಸಬೇಕು, 2ಎ ಮೀಸಲಾತಿಯನ್ನು ಮರುಸ್ಥಾಪಿಸಬೇಕು ಹಾಗೂ ಆಕ್ಸಿಜನ್ ಸಂತ್ರಸ್ತರಿಗೆ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ರಾರ್ ಅಹಮ್ಮದ್ ಒತ್ತಾಯಿಸಿದರು.

ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ 170 ಕೋಟಿ ರೂ, ಖರ್ಚುಮಾಡಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಿದ್ದಾರೆ. ಜಾತಿಗಣತಿ ನಡೆಸಿ 10 ವರ್ಷಗಳು ಕಳೆದಿದ್ದರೂ ಇಂದಿಗೂ ಜಾರಿಗೊಳಿಸಿಲ್ಲ. ಈ ನಿಟ್ಟಿನಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ಜಾರಿಗೆ ಕ್ರಮವಹಿಸಬೇಕು ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಮುಸ್ಲಿಂ ಸಮುದಾಯಕ್ಕೆ ಮೀಸಲಾಗಿದ್ದ 2ಎ ಮೀಸಲಾತಿಯನ್ನು ಬಿಜೆಪಿ ಸರ್ಕಾರ ರದ್ದುಪಡಿಸಿತ್ತು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೇ ಮೀಸಲಾತಿ ಮರುಸ್ಥಾಪನೆಯ ಆಶ್ವಾಸನೆ ನೀಡಿದ್ದರು. ಆಗಾಗಿ ಪ್ರಸ್ತುತ ರದ್ದಾಗಿರುವ ಮೀಸಲಾತಿಯನ್ನು ಶೇ.8 ಕ್ಕೆ ಏರಿಸಿ ಮರುಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಫೆ.10 ರಂದು ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಕಲೀಲ್ ಉಲ್ಲಾ, ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್, ರಂಗಕರ್ಮಿ ಕೆ.ವೆಂಕಟರಾಜು, ರೈತ ಮುಖಂಡ ಮಹೇಶ್ ಕುಮಾರ್, ದಲಿತ ಮುಖಂಡ ಸಂಘಸೇನಾ, ಮರಿಸ್ವಾಮಿ ಹಾಜರಿದ್ದರು.

ಕಣ್ಣೀರಿಟ್ಟ ಆಕ್ಸಿಜನ್ ಸಂತ್ರಸ್ಥೆ:

ಜಿಲ್ಲಾ ಆಸ್ಪತ್ರೆಯಲ್ಲಿ 4 ವರ್ಷಗಳ ಹಿಂದೆ ನಡೆದಿದ್ದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಸಂತ್ರಸ್ತರ ಪರವಾಗಿ ಎಸ್ಡಿಪಿಐ ಪಕ್ಷ ಹೋರಾಟ ನಿರಂತರ ಹೋರಾಟ ನಡೆಸಿತ್ತು. ಭಾರತ್ ಜೋಡೋ ಯಾತ್ರೆಯಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತ್ರಸ್ಥರ ಜತೆ ಸಮಾಲೋಚನೆ ನಡೆಸಿದ್ದರು.ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೇ ಸರ್ಕಾರಿ ಉದ್ಯೋಗದ ಭರವಸೆ ನೀಡಿದ ಕಾಂಗ್ರೆಸ್, ಸಂತ್ರಸ್ತರಿಗೆ ಕೇವಲ ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ಉದ್ಯೋಗ ನೀಡಿ ಕೈ ತೊಳೆದುಕೊಂಡಿದೆ. ಹೊರಗುತ್ತಿಗೆ ನೌಕರಿಯಲ್ಲಿ ಸೂಕ್ತ ಸಮಯಕ್ಕೆ ವೇತನವೂ ಆಗುತ್ತಿಲ್ಲ. ನಾವು ಜೀವನ ನಡೆಸುವುದೇ ತುಂಬಾ ಕಷ್ಟವಾಗಿದೆ ಎಂದು ಸಂತ್ರಸ್ಥೆ ಸವಿತಾ ಕಣ್ಣೀರು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net