ಆಕ್ಸಿಜನ್ ಘಟಕ ಆರಂಭ ಶೀಘ್ರ

13ckd1-Web
ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜ ಬಳಿ ಬೀರೇಶ್ವರ ಅಂತಾರಾಜ್ಯ ಸಹಕಾರಿ ಸಂಸ್ಥೆಯಿಂದ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ ಭೂಮಿಪೂಜೆ ನೆರವೇರಿಸಿದರು. ಬಸವಪ್ರಸಾದ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ ಇದ್ದರು.
Published on

ಚಿಕ್ಕೋಡಿ: ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಬೀರೇಶ್ವರ ಅಂತಾರಾಜ್ಯ ಸಹಕಾರಿ ಸಂಸ್ಥೆಯಿಂದ ದಿನಕ್ಕೆ 120 ಜಂಬೋ ಸಿಲಿಂಡರ್ ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಘಟಕ ತಿಂಗಳಾಂತ್ಯದಲ್ಲಿ ಪ್ರಾರಂಭವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ತಾಲೂಕಿನ ನಾಯಿಂಗ್ಲಜ ಬಳಿ ಇರುವ ಮೇಗ್ನಂಟಫ್ ಆವರಣದಲ್ಲಿ ಭಾನುವಾರ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಂಭವನೀಯ ಮೂರನೆ ಅಲೆಯಲ್ಲಿ ಸೋಂಕಿತರಿಗೆ ಆಕ್ಸಿಜನ್ ಕೊರತೆ ಉಂಟಾಗಬಾರದೆನ್ನುವ ಉದ್ದೇಶದಿಂದ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಘಟಕ ಪ್ರಾರಂಭಿಸಲಾಗುತ್ತಿದೆ. ಮೂರನೆಯ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಕರೊನಾದಿಂದಾಗಿ ಉಸಿರಾಟದ ತೊಂದರೆಯಿಂದ ಬಳಲುತ್ತಿರುವರಿಗೆ ಆಕ್ಸಿಜನ್ ಲಭ್ಯವಾಗಲಿ ಎನ್ನುವ ದೂರದೃಷ್ಟಿಯಿಂದ ಘಟಕ ಸ್ಥಾಪನೆ ಮಾಡಲಾಗುತ್ತಿದೆ. ಸರ್ಕಾರದಿಂದ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಜನಪ್ರತಿನಿಧಿಗಳು, ದಾನಿಗಳು ಸೇರಿಕೊಂಡು ಕರೊನಾ ತಡೆಗಟ್ಟಲು ಮುಂದಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಡಾ.ಎಂ.ಜಿ.ಹಿರೇಮಠ ಮಾತನಾಡಿ, ಜೊಲ್ಲೆ ಉದ್ಯೋಗ ಸಮೂಹ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಿದ್ದರಿಂದ ಜನರಿಗೆ ಅನುಕೂಲವಾಗಿದ್ದು, ಜೊಲ್ಲೆ ಪರಿವಾರ ಜಿಲ್ಲಾಡಳಿತದ ಹೊರೆ ಕಡಿಮೆ ಮಾಡಿದೆ ಎಂದರು.

ಬಸವಜ್ಯೋತಿ ಯುಥ್ ಫೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಮಾತನಾಡಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 600 ಗ್ರಾಮಗಳಲ್ಲಿ ಜೊಲ್ಲೆ ಉದ್ಯೋಗ ಸಮೂಹದಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಲಾಗಿದೆ ಎಂದರು.

ಡಿವೈಎಸ್‌ಪಿ ಮನೋಜ ನಾಯಿಕ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಜಯಾನಂದ ಜಾಧವ, ಗೋಪಾಲ ನಾಯಿಕ, ನಿಪ್ಪಾಣಿ ಪುರಸಭೆ ಅಧ್ಯಕ್ಷ ಜಯವಂತ ಬಾಟಲೆ, ಎಡಿಎಚ್‌ಒ ಡಾ.ಎಸ್.ಎಸ್.ಗಡೇದ ಮಾತನಾಡಿದರು. ಸಕ್ಕರೆ ಮಹಾಮಂಡಳ ಅಧ್ಯಕ್ಷ ವಿಶ್ವನಾಥ ಕಮತೆ, ಹಾಲಸಿದ್ಧನಾಥ ಸಕ್ಕರೆ ಕಾರಖಾನೆ ನಿರ್ದೇಶಕ ಅಪ್ಪಾಸಾಬ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಸಿಪಿಐ ಸಂಗಮೇಶ ಶಿವಯೋಗಿ, ತಹಸೀಲ್ದಾರ್ ಪ್ರವೀನ ಜೈನ, ಟಿಎಚ್‌ಒ ಡಾ.ವಿಠ್ಠಲ ಶಿಂಧೆ, ಸಿದ್ರಾಮ ಗಡೇದ ಉಪಸ್ಥಿತರಿದ್ದರು. ಹಾಲಪ್ಪ ಮಾದಪ್ಪಗೋಳ ಸ್ವಾಗತಿಸಿದರು. ರಮೇಶ ಪಾಟೀಲ ನಿರೂಪಿಸಿದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಸಾಕಾಗುವಷ್ಟು ಅಕ್ಸಿಜನ್ ವ್ಯವಸ್ಥೆಯನ್ನು ನಿಪ್ಪಾಣಿಯಿಂದ ಮಾಡಲಾಗಿದೆ. ಜಿಲ್ಲಾಧಿಕಾರಿ ಹಾಗೂ ಚಿಕ್ಕೋಡಿ ಉಪವಿಭಾಗಾಧಿಕಾರಿಗಳು ಎರಡನೆಯ ಅಲೆಯ ಕೋವಿಡ್ ನಿರ್ವಹಣೆಗೆ ಶ್ರಮಿಸಿದ ರೀತಿ ಶ್ಲಾಘನೀಯ. ಬಳ್ಳಾರಿ ಜಿಲ್ಲೆಯಲ್ಲಿ ಮೂರನೆಯ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಉತ್ತಮ ಆಸ್ಪತ್ರೆ ನಿರ್ಮಿಸಿದ್ದಾರೆ. ಅದು ರಾಜ್ಯಕ್ಕೆ ಮಾದರಿಯಾಗಿದ್ದು, ಬೆಳಗಾವಿಯಲ್ಲೂ ಅಂಥ ಆಸ್ಪತ್ರೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು.| ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net