‘ಆಕಾಶ್ ಬೈಜೂಸ್’ನಿಂದ ಅಕ್ಟೋಬರ್ 7ರಿಂದ 15ರವರೆಗೆ ದೇಶವ್ಯಾಪ್ತಿ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ

39
Published on

ಮೈಸೂರು: ಪ್ರತಿಷ್ಠಿತ ‘ಆಕಾಶ್ ಬೈಜೂಸ್’ ಇನ್ಸಿಟ್ಯೂಟ್‌ನಿಂದ ಅತಿದೊಡ್ಡ ವಿದ್ಯಾರ್ಥಿ ವೇತನ (ಸ್ಕಾಲರ್‌ಶಿಪ್) ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (ನ್ಯಾಷನಲ್ ಟ್ಯಾಲೆಂಟ್ ಹಂಟ್) ಅಕ್ಟೋಬರ್ 7ರಿಂದ 15ರವರೆಗೆ ದೇಶವ್ಯಾಪ್ತಿ ಏಕಕಾಲದಲ್ಲಿ ಆಯೋಜಿಸಲಾಗಿದೆ ಎಂದು ಆಕಾಶ್ ಬೈಜೂಸ್‌ನ ಹಿರಿಯ ಸಹಾಯಕ ನಿರ್ದೇಶಕ ಜೆ.ಅನಿಲ್‌ಕುಮಾರ್ ತಿಳಿಸಿದರು.
8ನೇ ತರಗತಿಯಿಂದ ಪಿಯು ಹಾಗೂ ಮೇಲ್ಪಟ್ಟ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶೇ.ನೂರಷ್ಟು ವಿದ್ಯಾರ್ಥಿ ವೇತನ, 700 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಗುವುದು. ಆಯ್ದ 100 ವಿದ್ಯಾರ್ಥಿಗಳನ್ನು ದೇಶದ ಹಲವು ವಿಜ್ಞಾನ ಕೇಂದ್ರಗಳಿಗೆ ಸಂಪೂರ್ಣ ವೆಚ್ಚವನ್ನು ಭರಿಸಿ ಉಚಿತ ಪ್ರವಾಸ ವ್ಯವಸ್ಥೆ ಮಾಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವರ್ಷ ದೇಶಾದ್ಯಂತ 16.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದು ದಾಖಲೆ ನಿರ್ಮಿಸಿದ್ದರು. ಈ ಬಾರಿ 18 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ನಿರೀಕ್ಷೆ ಇದೆ. ಈ ಪರೀಕ್ಷೆಯಿಂದ ನಮ್ಮ ಸಂಸ್ಥೆಯಲ್ಲಿ ಉಚಿತ ಕೋಚಿಂಗ್ ವ್ಯವಸ್ಥೆ ಇರುವುದರ ಜತೆಗೆ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಮುಂದೆ ಅವರು ತೆಗೆದುಕೊಳ್ಳುವ ಹಲವು ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸಲು ಸಹಕಾರ ನೀಡಲಾಗುವುದು ಎಂದು ಹೇಳಿದರು.
ಕಳೆದ 14 ವರ್ಷದಿಂದ ಈ ಪರೀಕ್ಷೆ ನಡೆಸಿಕೊಂಡು ಬರಲಾಗುತ್ತಿದ್ದು, ರಾಜ್ಯ ಪಠ್ಯಕ್ರಮ ಸೇರಿದಂತೆ ಎಲ್ಲ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ. ಗ್ರಾಮೀಣ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಆನ್‌ಲೈನ್, ಆಫ್‌ಲೈನ್ ಎರಡು ವಿಭಾಗದಲ್ಲಿಯೂ ಪರೀಕ್ಷೆ ನಡೆಯಲಿದ್ದು, ತಮಗೆ ಅನುಕೂಲವಾಗುವ ಪದ್ಧತಿಯಲ್ಲಿ ಪರೀಕ್ಷೆ ತೆಗೆದುಕೊಳ್ಳಬಹುದು ಎಂದರು.
‘ಆಕಾಶ್ ಬೈಜೂಸ್’ ಗ್ರಾಮಾಂತರ ಬಸ್ ನಿಲ್ದಾಣ ಬಳಿಯ ಶಾಖಾ ಮೇಲ್ವಿಚಾರಕ ದೀಪಕ್‌ಕುಮಾರ್ ಮಾತನಾಡಿ, ಆನ್‌ಲೈನ್‌ನಲ್ಲಿ ಪರೀಕ್ಷೆ ತೆಗೆದುಕೊಳ್ಳುವವರು ಅ.7ರಿಂದ 15ರವರೆಗೆ ಬೆಳಗ್ಗೆ 10ರಿಂದ ರಾತ್ರಿ 9 ಗಂಟೆವರೆಗೆ ಯಾವ ಅವಧಿಯಲ್ಲಿ ಬೇಕಾದರೂ ಪರೀಕ್ಷೆ ತೆಗೆದುಕೊಳ್ಳಬಹುದು. ಆಫ್‌ಲೈನ್ ಪರೀಕ್ಷೆ ಅ.8 ಮತ್ತು 15ರಂದು ಬೆಳಗ್ಗೆ 10.30 ಹಾಗೂ ಸಂಜೆ 4ರಿಂದ ಎರಡು ಅವಧಿಯಲ್ಲಿ ತಲಾ ಒಂದು ಗಂಟೆ ಕಾಲ ದೇಶದ ಎಲ್ಲೆಡೆ ಏಕಕಾಲದಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಪಠ್ಯಕ್ರಮದಲ್ಲಿನ ವಿಷಯಗಳನ್ನೇ ಆಧರಿಸಿ ಪ್ರಶ್ನೆಗಳು ಇರುತ್ತವೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ, ಸಾಮಾನ್ಯ ವಿಷಯ ಇರಲಿವೆ. 90 ಅಂಕಗಳ ಪರೀಕ್ಷೆಯಲ್ಲಿ 40 ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ ಎಂದರು.
ಆನ್‌ಲೈನ್ ಪರೀಕ್ಷೆಗೆ ಆಕ್ಟೋಬರ್ 5 ಹಾಗೂ ಆಫ್‌ಲೈನ್‌ಗೆ ಸೆಪ್ಟೆಂಬರ್ 30 ನೋಂದಣಿಗೆ ಕೊನೆಯ ದಿನವಾಗಿದೆ. ಪ್ರವೇಶ ಶುಲ್ಕ ನೂರು ರೂ. ನಿಗದಿಪಡಿಸಿದ್ದು, ಏಕ ಪಾಲಕರು, ಸೈನಿಕರು, ಸಾಧನೆ ಮಾಡಿದವರ ಮಕ್ಕಳಿಗೆ ವಿಶೇಷ ರಿಯಾಯಿತಿಯೂ ಇದೆ ಎಂದು ಹೇಳಿದರು.
ಕುವೆಂಪುನಗರ ಶಾಖೆಯ ಮೇಲ್ವಿಚಾರಕ ಅನಿಲ್‌ಕುಮಾರ್ ಮಾತನಾಡಿ, ಅ.27ರಂದು 10ನೇ ತರಗತಿ, ನವೆಂಬರ್ 3ರಂದು 8ರಿಂದ 9ನೇ ತರಗತಿ, ನವೆಂಬರ್ 8ರಂದು ಪ್ರಥಮ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ವೆಬ್‌ಸೈಟ್‌ನಲ್ಲಿ ಪ್ರಕಟಗೊಳ್ಳಲಿದೆ. ಮಾಹಿತಿಗೆ ವೆಬ್‌ಸೈಟ್ ಚ್ಞಠಿಛಿ..ಚ್ಚ.ಜ್ಞಿ ಮಾ ಅಥವಾ ಮೊ.7349671612 ಸಂಪರ್ಕಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರೀಕ್ಷೆ ಮಾಹಿತಿ ಕುರಿತ ಭಿತ್ತಿಪತ್ರವನ್ನು ಮತ್ತೊಬ್ಬ ಹಿರಿಯ ಸಹಾಯಕ ನಿರ್ದೇಶಕ ವಿಕ್ರಂ ಚಕ್ರವರ್ತಿ ಬಿಡುಗಡೆ ಮಾಡಿದರು. ಏರಿಯಾ ಬಿಜಿನೆಸ್ ಹೆಡ್ ಮನೀಶ್‌ಕುಮಾರ್, ಮಾಧ್ಯಮ ನಿರ್ವಾಹಕ ಆಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net