ಆಕಸ್ಮಿಕ ಬೆಂಕಿಗೆ ಕೊಬ್ಬರಿ ಗೋದಾಮು ಭಸ್ಮ

ಆಕಸ್ಮಿಕ ಬೆಂಕಿಗೆ ಕೊಬ್ಬರಿ ಗೋದಾಮು ಭಸ್ಮ
Published on


ಚನ್ನರಾಯಪಟ್ಟಣ: ತಾಲೂಕಿನ ಎ.ಚೋಳೇನಹಳ್ಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೊಬ್ಬರಿ ತುಂಬಿದ್ದ ಗೋದಾಮು ಸುಟ್ಟು ಕರಕಲಾಗಿದೆ.


ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರ ಸಹೋದರ ಜಿಪಂ ಮಾಜಿ ಸದಸ್ಯ ಸಿ.ಎನ್.ಪುಟ್ಟಸ್ವಾಮಿಗೌಡ ಅವರಿಗೆ ಸೇರಿದ ಗೋದಾಮು ಇದಾಗಿದ್ದು ಸುಮಾರು 40 ರಿಂದ 50 ಸಾವಿರಕ್ಕೂ ಹೆಚ್ಚು ಕೊಬ್ಬರಿ ತುಂಬಲಾಗಿತ್ತು ಎನ್ನಲಾಗಿದೆ.


ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸಿ.ಎನ್.ಪುಟ್ಟಸ್ವಾಮಿಗೌಡ ಅವರು ತಮ್ಮ ಕುಟುಂಬದೊಂದಿಗೆ ಪಟ್ಟಣದಲ್ಲಿ ವಾಸವಿದ್ದು ಸದ್ಯಕ್ಕೆ ಸ್ವಗ್ರಾಮದಲ್ಲಿದ್ದ ಗೋದಾಮು ನೋಡಿಕೊಳ್ಳಲು ಪರಿಚಯದ ಕುಟುಂಬವೊಂದಕ್ಕೆ ನೇಮಿಸಲಾಗಿತ್ತು.


ಬುಧವಾರ ಮಧ್ಯರಾತ್ರಿ ಸುಮಾರಿನಲ್ಲಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಕ್ಕಪಕ್ಕದವರು ನೋಡಿ ಕೂಗಾಡಿದ ಪರಿಣಾಮ ಗ್ರಾಮಸ್ಥರೆಲ್ಲ ಬಿಂದಿಗೆ ಹಾಗೂ ಬಕೇಟ್‌ಗಳಲ್ಲಿ ನೀರು ತಂದು ಎಸೆದು ನಂದಿಸಲು ಪ್ರಯತ್ನಿಸಿದಷ್ಟು ಬೆಂಕಿ ಕೆನ್ನಾಲಿಗೆ ಚಾಚಿ ಮುಗಿಲು ಮುಟ್ಟುವಂತೆ ಹೊತ್ತಿ ಉರಿದಿದೆ.


ವಿಷಯ ತಿಳಿಯುತಿದ್ದಂತೆಯೇ ಚನ್ನರಾಯಪಟ್ಟಣದಿಂದ 2 ಹಾಗೂ ಪಕ್ಕದ ಕೆ.ಆರ್.ಪೇಟೆಯಿಂದ 2 ಅಗ್ನಿ ಶಾಮಕ ದಳ ಆಗಮಿಸಿದ್ದು ಗ್ರಾಮಸ್ಥರ ಸಹಕಾರದೊಂದಿಗೆ ಸತತ 4-5 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸಲಾಯಿತು. ಆದರೆ ಕೊಬ್ಬರಿ ಸಂಪೂರ್ಣ ಸುಟ್ಟು ಕರಕಲಾಗಿವೆ.


ಗೋದಾಮಿನ ಗೋಡೆಗಳು ಬಿರುಕು ಬಿಟ್ಟಿದ್ದು ಬಾಗಿಲು, ಕಿಟಕಿಗಳು ಹಾಗೂ ಛಾವಣಿ ಸಹ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಶಾಸಕ ಸಿ.ಎನ್.ಬಾಲಕೃಷ್ಣ, ಜಿಪಂ ಮಾಜಿ ಸದಸ್ಯೆ ಕುಸುಮರಾಣಿ, ಅವರ ಕುಟುಂಬ ವರ್ಗ ಹಾಗೂ ಹತ್ತಿರದ ಊರುಗಳಿಂದ ಸಂಬಂದಿಕರು ಮತ್ತು ಸಾರ್ವಜನಿಕರು ಜಮಾಯಿಸಿದ್ದರು.


ವಿಎ, ವೃತ್ತ ನಿರೀಕ್ಷಕರು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net