ಆಕಳು, ಎತ್ತು ಸಂರಕ್ಷಣೆಗೆ ಪ್ರತಿಜ್ಞೆ ಮಾಡಿ

Oplus_131072
ಬಸವಕಲ್ಯಾಣ ತಾಲೂಕಿನ ಜಾಪುರವಾಡಿಯಲ್ಲಿ ನೂತನವಾಗಿ ನಿರ್ಮಿಸಿದ ವೀರ ಹನುಮಾನ ದೇವಸ್ಥಾನದ ಕಳಸಾರೋಹಣ ಹಾಗೂ ಪ್ರತಿಮೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ಜಯಶಾಂತಲಿಂಗ ಮಹಾಸ್ವಾಮೀಜಿ, ಶ್ರೀ ಗುರುಪಾದಲಿಂಗ ಮಹಾಸ್ವಾಮೀಜಿ, ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶ್ರೀ ಅಭಿನವ ಕಾರ್ತಿಕೇಶ್ವರ ಸ್ವಾಮೀಜಿ, ಶ್ರೀ ಶಿವಪ್ರಸಾದ ದೇವರು, ಶಾಸಕ ಶರಣು ಸಲಗರ, ನಿರಂಜಪ್ಪ ಬಿರಾದಾರ, ಬಾಬು ಹೊನ್ನಾನಾಯಕ, ಜಗನ್ನಾಥ ಪಾಟೀಲ್ ಇದ್ದರು.
Published on

ಬಸವಕಲ್ಯಾಣ: ಪ್ರತಿಯೊಬ್ಬರೂ ಆಕಳು, ಕರು, ಎತ್ತುಗಳ ಸಂರಕ್ಷಣೆ ಪ್ರತಿಜ್ಞೆ ಮಾಡಬೇಕು ಎಂದು ಶಾಸಕ ಶರಣು ಸಲಗರ ಮನವಿ ಮಾಡಿದರು.

ಜಾಪುರವಾಡಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಹೊಸದಾಗಿ ನಿರ್ಮಿಸಿದ ವೀರ ಹನುಮಾನ ದೇವಸ್ಥಾನದ ಕಳಸಾರೋಹಣ ಹಾಗೂ ಪ್ರತಿಮೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಲು ಕೊಡುವ ಅಕಳನ್ನು ಕಟುಕರಿಗೆ ಮಾರಿದರೆ ಒಳ್ಳೆಯದಾಗದು. ನಾವೆಲ್ಲ ರೈತರು, ನಮ್ಮ ಮನೆ ಪರಿಸರದಲ್ಲಿರುವ ಆಕಳು, ಕರು, ಎತ್ತುಗಳನ್ನು ಯಾವ ಕಾರಣಕ್ಕೂ ಬದುಕಿರುವವರೆಗೆ ಕಟುಕರಿಗೆ ಮಾರಾಟ ಮಾಡುವುದಿಲ್ಲವೆಂಬ ಪ್ರತಿಜ್ಞೆ ಮಾಡಬೇಕು ಎಂದರು.

ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ ಮಾತೆಯರ ಕೈಯಲ್ಲಿದೆ. ತಾವು ಮನಸ್ಸು ಮಾಡಿದರೆ ಮಕ್ಕಳನ್ನು ದೇಶದ ಅತ್ಯುನ್ನತ ಸ್ಥಾನದಲ್ಲಿ ಕಾಣಲು ಸಾಧ್ಯ. ಗ್ರಾಮದಲ್ಲಿ ಮಂದಿರ ಕಳಸಾರೊಹಣ ಮತ್ತು ಪ್ರಾಣ ಪ್ರತಿಷ್ಠಾಪನೆಗೆ ಬೇರೆ ಜಿಲ್ಲೆ, ನೆರೆ ರಾಜ್ಯದಲ್ಲಿ ಕೆಲಸ ಮಾಡುವ ಗ್ರಾಮಸ್ಥರೆಲ್ಲರೂ ಭಕ್ತಿಯಿಂದ ಆಗಮಿಸಿರುವುದು ಸಂತಸದ ವಿಷಯ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲೂ ತಾವೆಲ್ಲರೂ ಭಾಗವಹಿಸಬೇಕು ಎಂದು ಕೇಳಿಕೊಂಡರು.

ಸಾನ್ನಿಧ್ಯ ವಹಿಸಿದ್ದ ಹಾರಕೂಡ ಸಂಸ್ಥಾನ ಹಿರೇಮಠ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಭಕ್ತಿ ಮಾರ್ಗದಲ್ಲಿ ಶಕ್ತಿ ಅಡಗಿದೆ. ಅಚಲ ಭಕ್ತಿಯಿಂದ ಅಸಾಧ್ಯವಾದದ್ದು ಸಹ ಸಾಧಿಸಲು ಸಾಧ್ಯ. ಶ್ರೀರಾಮನ ಮೇಲಿನ ಅಚಲ ಭಕ್ತಿಯಿಂದಲೇ ಹನುಮಂತ ದೇವರು ಲಂಕೆಗೆ ಹೋಗಲು ಸೇತುವೆ ನಿರ್ಮಿಸಲು ಸಾಧ್ಯವಾಯಿತು. ಎಲ್ಲರೂ ಭಕ್ತಿ ಮಾರ್ಗದಲ್ಲಿ ನಡೆಯಬೇಕು ಎಂದು ಉಪದೇಶಿಸಿದರು.

ಮಳಖೇಡದ ಶ್ರೀ ಅಭಿನವ ಕಾರ್ತಿಕೇಶ್ವರ ಸ್ವಾಮೀಜಿ ಮಾತನಾಡಿ, ಭಕ್ತಿ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಶಾಂತಿ, ನೆಮ್ಮದಿ ಕಾಣಲು ಸಾಧ್ಯವಾಗಲಿದೆ ಎಂದರು.

ಮುತ್ಯಾನ ಬಬಲಾದನ ಶ್ರೀ ಗುರುಪಾದಲಿಂಗ ಶಿವಯೋಗಿಗಳು, ಶ್ರೀ ಶಿವಪ್ರಸಾದ ದೇವರು ನೇತೃತ್ವ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ನಿರಂಜಪ್ಪ ಬಿರಾದಾರ, ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ. ಹಿರೇಮಠ, ಜಗನ್ನಾಥ ಪಾಟೀಲ್, ಬಾಬು ಹೊನ್ನಾನಾಯಕ ಉಪಸ್ಥಿತರಿದ್ದರು.

ಮಲ್ಲಿಕಾರ್ಜುನ ಆಲಗೂಡೆ ಸ್ವಾಗತಿಸಿದರು. ಕಾರ್ತಿಕ್ ಸ್ವಾಮಿ ಯಲ್ಲದಗುಂಡಿ ಪ್ರಾರ್ಥನಾಗೀತೆ ಹಾಡಿದರು. ಸಂಜು ಸ್ವಾಮಿ, ಮಲ್ಲಿಕಾರ್ಜುನ ನಾಗಮಾರಪಳ್ಳಿ ಸಂಗೀತ ಸೇವೆ ಸಲ್ಲಿಸಿದರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿ ಹಾರಕೂಡ ಶ್ರೀಗಳ ಆಶೀರ್ವಚನ ವಾಚಿಸಿದರು.

ಭಾರತ ಭಕ್ತಿಯ ಭವನ: ಭಕ್ತಿ, ಶ್ರದ್ಧೆ, ಆರಾಧನೆಯಂತಹ ಸಾತ್ವಿಕ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಶ್ರೇಷ್ಠ ನೆಲ ಭಾರತ ನಿಜವಾಗಿಯೂ ಭಕ್ತಿಯ ಭವನವೇ ಆಗಿದೆ ಎಂದು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು. ಸಾನ್ನಿಧ್ಯ ವಹಿಸಿದ್ದ ಅವರು, ಜಾಪುರವಾಡಿ ಗ್ರಾಮಸ್ಥರು ಶ್ರದ್ಧಾ ಭಕ್ತಿಯಿಂದ ನಿರ್ಮಿಸಿದ ಶ್ರೀ ವೀರ ಹನುಮಾನ ಮಂದಿರ ಅಧ್ಯಾತ್ಮ ಸೌಧವಾಗಿ ನಿರಂತರ ಧರ್ಮ ಕಾರ್ಯಗಳಿಗೆ ಸ್ಫೂರ್ತಿ ನೀಡುವಂತಾಗಲಿ ಶುಭ ಹಾರೈಸಿದರು. ಧೈರ್ಯ, ಶೌರ್ಯ, ಸಾಹಸ, ಪರಾಕ್ರಮ, ದೂರದೃಷ್ಟಿಗಳಂತಹ ಶ್ರೇಷ್ಠ ಗುಣದ ಹನುಮಂತ ಇಂದು ಮತ್ತು ಎಂದೆಂದಿಗೂ ಸ್ಫೂರ್ತಿಯ ಸಿಂಧುವಾಗಿದ್ದಾರೆ. ಹನುಮಂತನನ್ನು ಕೇವಲ ಮಂದಿರದಲ್ಲಿ ಮೂರ್ತಿ ರೂಪದಲ್ಲಿ ನೋಡದೆ ಆತನ ಆದರ್ಶಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡು ಅನುಸರಿಸಿದರೆ ಆಂಜನೇಯ ಸ್ವಾಮಿ ಕೃಪೆಗೆ ಪಾತ್ರರಾಗುವುದು ನಿಶ್ಚಿತ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net