

ಚಾಮರಾಜನಗರ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ತುಕಡಿಗಳ ಪಥಸಂಚಲನ ಆಕರ್ಷಕವಾಗಿತ್ತು. ಜಿಲ್ಲಾ ಶಸಸ್ತ್ರ ಪೊಲೀಸ್ ಕೇಂದ್ರ ಸ್ಥಾನ ತುಕಡಿ, ಉಪ ವಿಭಾಗದ ಪೊಲೀಸ್ ತುಕಡಿ, ಅರಣ್ಯ ಗಸ್ತು ರಕ್ಷಣಾ ಪಡೆ, ಗೃಹರಕ್ಷಕ ದಳ, ಜೆಎಸ್‌ಎಸ್ ಬಾಲಕರ ಪ್ರೌಢಶಾಲೆ, ಬಂಜಾರಾ ಇಂಡಿಯನ್ ಶಾಲೆ ಸೇವಾದಳ, ಜೆಎಸ್‌ಎಸ್ ಬಾಲಕಿಯರ ಪ್ರೌಢಶಾಲೆ, ಸಂತ ಜೋಸೆಫರ ಪ್ರೌಢಶಾಲೆ, ಆದರ್ಶ ವಿದ್ಯಾಲಯ, ಸೇವಾ ಭಾರತಿ ಪ್ರೌಡಶಾಲೆ ತುಕಡಿಗಳು ಹಾಗೂ ನಂಜುಂಡಯ್ಯ ಅವರ ನೇತೃತ್ವದ ಬ್ಯಾಂಡ್ ವೃಂದಪಥ ಸಂಚಲನದಲ್ಲಿ ಭಾಗವಹಿಸಿದ್ದವು.
ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ:
ನಗರದ ಸಂತ ಪೌಲರ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ’ಕೇಳಿಸದೇ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ’, ’ಕರುನಾಡ ತಾಯಿ ಸದಾ ಚಿನ್ಮಯಿ’, ’ನಮ್ಮವ್ವ ಕಾಣೋ ಕನ್ನಡ’ ಹಾಡಿನ ನೃತ್ಯ ಗಮನ ಸೆಳೆಯಿತು. ಸಂತ ಫ್ರಾನ್ಸಿಸ್ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ’ನಾನು ಕನ್ನಡಿಗ ಕನ್ನಡದ ಕಾವಲಿಗ, ಜೀವ ಕನ್ನಡ ದೇಹ ಕನ್ನಡ, ಪದ ಪದ ಕನ್ನಡ ಪದ, ಕರುನಾಡೆ ಕೈ ಚಾಚಿದೇ ನೋಡೆ ಗೀತೆಗಳ ನೃತ್ಯ ಆಕರ್ಷಕವಾಗಿತ್ತು. ದೀನಬಂಧು ಪ್ರೌಢಶಾಲೆಯ ವಿದ್ಯಾರ್ಥಿಗಳು ಕನ್ನಡ ತಾಯಿಯ ಮಕ್ಕಳು ನಾವೆಲ್ಲಾ ಒಂದೇ ಎಂಬ ಗೀತೆಗೆ ಬಹಳ ಅಚ್ಚುಕಟ್ಟಾಗಿ ಹೆಜ್ಜೆ ಹಾಕಿದರು. ಸೇವಾ ಭಾರತಿ ಪ್ರೌಡಶಾಲೆ ವಿದ್ಯಾರ್ಥಿಗಳಿಂದ ಅ ಆ ಇ ಈ ಕನ್ನಡದ ಅಕ್ಷರ ಮಾಲೆ ನೃತ್ಯ ನೋಡುಗರನ್ನು ರಂಜಿಸಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಳದಿ ಮತ್ತು ಕೆಂಪು ಬಣ್ಣದ ವಸಗಳನ್ನು ಧರಿಸಿದ್ದು, ಗಮನಸೆಳೆಯಿತು.