ಆಕರ್ಷಕ ಕಲಾಕೃತಿ ಮಾದರಿಗಳಿಗೆ ಪ್ರಶಂಸೆ

Pushpa
Published on

ಚಿತ್ರದುರ್ಗ: ಜಿಲ್ಲಾ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಿರುವ ಫಲ-ಪುಷ್ಪ ಪ್ರದರ್ಶನವನ್ನು ಸೋಮವಾರ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ವೀಕ್ಷಿಸಿದರು. ಆಕರ್ಷಕ ಕಲಾಕೃತಿ ಮಾದರಿಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.

ಪ್ರದರ್ಶನದಲ್ಲಿ ಹೆಣ್ಣಿಗೆ ಗೌರವ ಸೂಚಿಸುವ, ಮಯೂರವರ್ಮ, ಸ್ವಾವಲಂಬಿ ರೈತ, ವಾಣಿವಿಲಾಸ ಸಾಗರ ಸೇರಿ ಇನ್ನಿತರೆ ಕಲಾಕೃತಿ ಅತ್ಯುತ್ತಮವಾಗಿ ಮೂಡಿಬಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂತಹ ಫಲ-ಪುಷ್ಪ ಪ್ರದರ್ಶನಗಳು ರೈತರಿಗೆ ಪ್ರೇರಣೆ ನೀಡುತ್ತವೆ. ಒಂದೇ ಸೂರಿನಡಿ ಜಿಲ್ಲೆಯ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಮಾಹಿತಿ ನೀಡುವ, ಸೌಲಭ್ಯಗಳನ್ನು ತಿಳಿಸುವ ಕಾರ್ಯ ಶ್ಲಾಘನೀಯ. ತೋಟಗಾರಿಕೆ ವಿಸ್ತರಣೆಗೂ ಉತ್ತೇಜನ ನೀಡುವಂತಿದೆ ಎಂದರು.

ಪ್ರದರ್ಶನದಲ್ಲಿ ತೋಟಗಾರಿಕೆ ಸಂಬಂಧ ರೈತರಿಗೆ ವಿವಿಧ ಬಗೆಯ ಹಣ್ಣು, ಹೂಗಳ ತಳಿಗಳು ಸೇರಿ ಇನ್ನಿತರೆ ಉಪಯುಕ್ತ ಮಾಹಿತಿ ಲಭ್ಯವಾಗುವುದರಿಂದ, ತಮ್ಮ ಹೊಲಗಳಲ್ಲಿ ಅವುಗಳನ್ನು ಬೆಳೆಯಲು, ಆರ್ಥಿಕ ಸಬಲತೆ ಜೊತೆಗೆ ಸ್ವಾವಲಂಬಿಗಳಾಗಲು ಸಹಕಾರಿಯಾಗಿದೆ ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ. ಸವಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net