ಆಂಬುಲೆನ್ಸ್‌ನಲ್ಲೇ ಗರ್ಭಿಣಿಗೆ ಹೆರಿಗೆ

mysore
Published on

ಮೈಸೂರು: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ಆಂಬುಲೆನ್ಸ್‌ನಲ್ಲೇ ಮಂಗಳವಾರ ಹೆರಿಗೆಯಾಗಿದೆ.

ಸರಗೂರು ತಾಲೂಕಿನ ಭಾವಿಕೆರೆ ಗ್ರಾಮದ ನಂದಿನಿ ಅವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಎಚ್.ಡಿ.ಕೋಟೆ ಪಟ್ಟಣದ ಸೇಂಟ್ ಮೇರೀಸ್ ಸಮುದಾಯ ಕೇಂದ್ರಕ್ಕೆ ಆಗಮಿಸಿದ್ದರು. ಗರ್ಭಿಣಿ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿನ ವೈದ್ಯರು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.

ಕೂಡಲೇ ಅಂತರಸಂತೆ ವ್ಯಾಪ್ತಿಯ 108 ಆಂಬುಲೆನ್ಸ್ ವಾಹನ ಆಗಮಿಸಿ ಗರ್ಭಿಣಿಯನ್ನು ಮೈಸೂರಿಗೆ ಕರೆ ತರುವಾಗ ಮೈಸೂರು ತಾಲೂಕಿನ ಸಾಲುಂಡಿ ಗ್ರಾಮದ ಬಳಿ ಮಹಿಳೆಗೆ ಹೆರಿಗೆ ನೋವು ಜಾಸ್ತಿಯಾಗಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಶುಷ್ರೂಷಕ ಅಧಿಕಾರಿ ಆರ್.ಸುರೇಶ್ ಆರೈಕೆ ಮಾಡಿ ವೈದ್ಯರ ಸಲಹೆ ಪಡೆದು ಆಂಬುಲೆನ್ಸ್‌ನಲ್ಲೆ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಇಎಂಟಿ ಸುರೇಶ್ ಅವರ ಸಮಯ ಪ್ರಜ್ಞೆಯಿಂದಾಗಿ ನಂದಿನಿ ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ.

ಬಳಿಕ ತಾಯಿ ಮಗುವನ್ನು ನಗರದ ತುಳಸಿದಾಸಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಸುರೇಶ ಹಾಗೂ ಪೈಲಟ್ ಆನಂದ್ ಅವರ ಸಮಯ ಪ್ರಜ್ಞೆಯಿಂದ ತಾಯಿ, ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net