ಆಂಬುಲೆನ್ಸ್ ಸೇವೆಯಲ್ಲಿ ಆಮೂಲಾಗ್ರ ಬದಲಾವಣೆ ; ಸರ್ಕಾರದಿಂದ ದಿಟ್ಟ ಹೆಜ್ಜೆ *ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ

13TMK_CNH_Hospl_Open_Photos 1
Published on

ಚಿಕ್ಕನಾಯಕನಹಳ್ಳಿ : ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳನ್ನು ಕಮಾಂಡ್ ಸೆಂಟರ್‌ನಲ್ಲಿ ಮ್ಯಾಪ್ ಆಗುವಂತಹ ವ್ಯವಸ್ಥೆ ಮಾಡುವ ಮೂಲಕ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಜೆ.ಸಿ.ಪುರದಲ್ಲಿ ಭಾನುವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಮುಂದಿನ 2 ತಿಂಗಳಲ್ಲಿ ಕಮಾಂಡ್ ಸೆಂಟರ್‌ನ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ, ನಂತರ ಆಂಬುಲೆನ್ಸ್ ಸೇವೆಯಲ್ಲೂ ಆಮೂಲಾಗ್ರ ಬದಲಾವಣೆಯಾಗಲಿದೆ ಎಂದರು.

ಆರೋಗ್ಯ ಸೇವೆ ಉನ್ನತೀಕರಿಸಿ, ಮೂಲಸೌಕರ್ಯ ಒದಗಿಸಲು ಎಷ್ಟು ಹೂಡಿಕೆ ಮಾಡಿದರೂ ಸಾಲದು. ಅಮೆರಿಕದಂತಹ ದೇಶ ವರ್ಷಕ್ಕೆ 23 ಟ್ರಿಲಿಯನ್ ಡಾಲರ್ ಜಿಎಸ್‌ಟಿಯಲ್ಲಿ ಶೇ.20 ಜಿಎಸ್‌ಟಿ ಮೊತ್ತವನ್ನು ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸುತ್ತಿದೆ ಎಂದರು.

ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ತುರ್ತು ಸೇವೆ ಪ್ರತಿಯೊಬ್ಬರಿಗೂ ದೊರೆಯಬೇಕಾಗಿದೆ. ಸಮಗ್ರವಾಗಿ, ಬಹಳ ವೇಗವಾಗಿ 20 ನಿಮಿಷದೊಳಗೆ ಆಂಬುಲೆನ್ಸ್ ಸೇವೆ ದೊರೆಯಬೇಕು. ಈ ಸಂಬಂಧ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

1730 ವೈದ್ಯರ ನೇರ ನೇಮಕಾತಿ ಮಾಡಿಕೊಳ್ಳಲಾಗಿದೆ, 2 ಸಾವಿರ ವೈದ್ಯರನ್ನು ಕಡ್ಡಾಯ ಗ್ರಾಮೀಣ ಸೇವೆ ಯೋಜನೆಯಲ್ಲಿ ನೇಮಕ ಮಾಡಲಾಯಿತು. ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ ಎಂದರು.

ಸರ್ಕಾರದ ವತಿಯಿಂದ ಆರೋಗ್ಯ ಶಿಬಿರ ನಡೆಸುವ ಚಿಂತನೆಯಿದ್ದು, ಹೃದಯ, ಕ್ಯಾನ್ಸರ್‌ಗೆ ಸಂಬಂಧಿಸಿದ ವ್ಯಾದಿಗಳು, ಮೂತ್ರ ಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಶಿಬಿರಗಳನ್ನು ನಡೆಸಲಾಗುವುದು ಎಂದರು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ತುಮಕೂರು ನಗರದಲ್ಲಿ ಮೂರು ಮೆಡಿಕಲ್ ಕಾಲೇಜುಗಳು ಇವೆ. ಹಾಗಾಗಿ ಜಿಲ್ಲಾಸ್ಪತ್ರೆಗೆ ಮೆಡಿಕಲ್ ಕಾಲೇಜು ಬೇಡ ಎಂದು ನಾವೇ ಬಜೆಟ್ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿ, ಸ್ನಾತಕೋತ್ತರ ಕೋರ್ಸ್ ಮಂಜೂರು ಮಾಡಿಸಿದೆವು ಎಂದರು.

ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 45 ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶವಿದೆ. ಇದರ ಸದ್ಬಳಕೆಯನ್ನು ಗ್ರಾಮೀಣ ಜನರ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ಆರೋಗ್ಯದ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಮ್ಮ ಆರೋಗ್ಯ ನಮ್ಮ ಹೊಣೆ ಎಂಬುದನ್ನು ಮರೆಯಬಾರದು. ಡಾ.ಸುಧಾಕರ್, ಆರೋಗ್ಯ ಸಚಿವ ತುಮಕೂರು ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ನೀಡುವುದಾದರೆ ತಿಪಟೂರು ತಾಲೂಕು ಕೆ.ಬಿ.ಕ್ರಾಸ್‌ಗೆ ನೀಡಬೇಕು, ಇಲ್ಲಿ ಮಾಡಿದರೆ ಗ್ರಾಮೀಣ ಜನರಿಗೆ ಅನುಕೂಲವಾಗಲಿದೆ. ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net