

ನೆಲಮಂಗಲ/ಬೆಂ.ಗ್ರಾಮಾಂತರ: ಓವರ್‌ಟೇಕ್ ಮಾಡಿದ ಎಂಬ ಕಾರಣಕ್ಕೆ ಆಂಬುಲೆನ್ಸ್ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ವಿಲಕ್ಷಣ ಪ್ರಕರಣ ನೆಲಮಂಗಲದ ಟೋಲ್ ಬಳಿ ಭಾನುವಾರ ನಡೆದಿದೆ. ಹಲ್ಲೆ ಮಾಡಿದ ಆರೋಪದ ಮೇಲೆ ಸೋಮವಾರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಯುವರಾಜ್‌ಸಿಂಗ್ (25) ಬೆಂಗಳೂರಿನ ಮಂಜುನಾಥ್ (24) ಹಾಗೂ ಲಿಖಿತ್ (25) ಬಂಧಿತರು. ಆಂಬುಲೆನ್ಸ್ ಚಾಲಕ ಜಾನ್ ಗಾಯಗೊಂಡಿದ್ದು, ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ?: ಐದು ತಿಂಗಳ ಮಗುವಿನ ತುರ್ತು ಚಿಕಿತ್ಸೆ ಹಿನ್ನೆಲೆಯಲ್ಲಿ ಮಗು ಹಾಗೂ ತಾಯಿಯೊಂದಿಗೆ ತುಮಕೂರಿನ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ಆಂಬುಲೆನ್ಸ್ ಸಾಗುತ್ತಿತ್ತು. ಈ ವೇಳೆ ಮುಂದೆ ಸಾಗುತ್ತಿದ್ದ ಕಾರನ್ನು ಸಹಜವಾಗಿ ಆಂಬುಲೆನ್ಸ್ ಓವರ್‌ಟೇಕ್ ಮಾಡಿದೆ. ಇದರಿಂದ ಕೆರಳಿದ ಕಾರು ಚಾಲಕ ಐದಾರು ಕಿಮೀವರೆಗೆ ಆಂಬುಲೆನ್ಸ್ ಹಿಂಬಾಲಿಸಿ ನೆಲಮಂಗಲ ಟೋಲ್ ಬಳಿ ಅಡ್ಡಗಟ್ಟಿದ್ದಾನೆ. ನನ್ನ ಕಾರನ್ನೇ ಓವರ್‌ಟೇಕ್ ಮಾಡ್ತೀಯಾ ಎಂದು ಜಗಳ ತೆಗೆದ ಕಾರಿನಲ್ಲಿದ್ದವರು ಆಂಬುಲೆನ್ಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಪೊಲೀಸರ ಕಂಡು ಪರಾರಿ: ಟೋಲ್ ಬಳಿ ಗಲಾಟೆ ನಡೆಯುತ್ತಿದ್ದ ಮಾಹಿತಿ ತಿಳಿದು ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರನ್ನು ಕಂಡ ಕೂಡಲೇ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ. ಬಳಿಕ ಚಾಲಕ ಆಂಬುಲೆನ್ಸ್ ಚಲಾಯಿಸಿಕೊಂಡು ವಾಣಿವಿಲಾಸ್ ಆಸ್ಪತ್ರೆ ತಲುಪಿದ್ದಾನೆ.
ಹಲ್ಲೆಕೋರರು ನಶೆಯಲ್ಲಿದ್ದರು?: ಬೆಂಗಳೂರಿನ ಯಲಚೇನಹಳ್ಳಿ ನಿವಾಸಿಗಳಾದ ಆರೋಪಿಗಳು ಡೆಕೋರೇಷನ್ ಕೆಲಸ ಮಾಡುತ್ತಿದ್ದರು. ತುಮಕೂರಿನ ಮದುವೆಯೊಂದರಲ್ಲಿ ಕೆಲಸ ಮುಗಿಸಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಮಾರ್ಗ ಮಧ್ಯೆ ಮದ್ಯಪಾನ ಮಾಡಿದ್ದರು. ನಶೆಯಲ್ಲಿದ್ದ ಆರೋಪಿಗಳು ಓವರ್‌ಟೇಕ್ ಮಾಡುತ್ತಿದ್ದ ವಾಹನಗಳನ್ನು ಅಟ್ಟಾಡಿಸಿಕೊಂಡು ಹೋಗಿ ಓವರ್‌ಟೇಕ್ ಮಾಡುತ್ತಾ ವಿಕೃತಿ ಮೆರೆಯುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸರನ್ನು ಕಂಡು ಆರೋಪಿಗಳು ಪರಾರಿಯಾಗಿದ್ದರಿಂದ ಆರೋಪಿಗಳು ಮದ್ಯ ಸೇವಿಸಿದ್ದರೇ ಅಥವಾ ಮಾದಕವಸ್ತು ಸೇವಿಸಿದ್ದರೆ ಎಂಬುದು ದೃಢವಾಗಿಲ್ಲ. ಸೋಮವಾರ ಆರೋಪಿಗಳನ್ನು ಬಂಧಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾನೂನು ಕ್ರಮಕ್ಕೆ ಒತ್ತಾಯ: ಆಂಬುಲೆನ್ಸ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಂಬುಲೆನ್ಸ್ ಚಾಲಕರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು. ಗ್ರಾಮಾಂತರ ಠಾಣೆ ಎದುರು ಸೋಮವಾರ ಸಮಾವೇಶಗೊಂಡ ಆಂಬುಲೆನ್ಸ್ ಚಾಲಕರು ಜೂ.9ರ ಸಂಜೆ ಚಿಕಿತ್ಸೆ ಕಾರಣಕ್ಕಾಗಿ ಕಾರನ್ನು ಓವರ್ ಟೇಕ್ ಮಾಡಿರುವ ಆಂಬುಲೆನ್ಸ್ ಚಾಲಕ ಜಾನ್ ಮೇಲೆ ಕಾರಿನಲ್ಲಿದ್ದವರು ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳು ನಶೆಯಲ್ಲಿದ್ದು, ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು. ಗ್ರಾಮಾಂತರ ಪೊಲೀಸ್ ಆರಕ್ಷಕ ನಿರೀಕ್ಷಕ ಕಚೇರಿಯಲ್ಲಿ ದೂರು ದಾಖಲಿಸಿದರು. ಚಾಲಕರಾದ ಕಿರಣ್, ಉತಾಸಿಪಾಳ್ಯ ನರೇಂದ್ರ, ಶ್ರೀಕಾಂತ್, ಹರೀಶ್, ಅಶೋಕ್, ಮನುಕುಮಾರ್, ಮಂಜುನಾಥ್,
ನವೀನ್‌ಕುಮಾರ್ ಇದ್ದರು.
ಟೋಲ್‌ನ ಸಿಸಿ ಕ್ಯಾಮರಾದಲ್ಲಿನ ದೃಶ್ಯ ಆಧರಿಸಿ ಕಾರಿನ ನೋಂದಣಿ ಸಂಖ್ಯೆ ಜಾಡು ಹಿಡಿದು ಆರೋಪಿಗಳನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಿ ಬಂಧಿಸಲಾಗಿದೆ. ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ವರದಿ ಬಂದ ಬಳಿಕ ಮದ್ಯ ಸೇವಿಸಿದ್ದರೆ ಅಥವಾ ಮತ್ಯಾವುದೇ ಮಾದಕವಸ್ತು ಸೇವನೆಯಾಗಿದೆಯೇ ಎಂಬುದು ದೃಢಪಡಲಿದೆ. ತನಿಖೆ ಮುಂದುವರಿದಿದೆ.
ಮಲ್ಲಿಕಾರ್ಜುನ ಬಾಲದಂಡಿ, ಬೆಂಗಳೂರು ಗ್ರಾಮಾಂತರ ಎಸ್‌ಪಿ