

ಬೀದರ್: ಆಂಧ್ರ ಮತ್ತು ತಮಿಳುನಾಡು ಮಾದರಿಯಲ್ಲಿ ಸಿಎಲ್-2 ಪರವಾನಗಿ ಮದ್ಯದ ಅಂಗಡಿಗಳಲ್ಲಿ ನಿಂತು ಕುಡಿಯಲು ಅವಕಾಶ ಕೊಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ವೈನ್ಶಾಪ್ ವ್ಯಾಪಾರಿಗಳ ಸಂಘದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಡಾ.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಸಂಘದ ಪ್ರಮುಖರು, ಸಿಎಲ್-2ಗಳಲ್ಲಿ ದರ್ಶನಿ ಹೋಟೆಲ್ ಮಾದರಿ ನಿಂತು ಮದ್ಯ ಕುಡಿಯಲು ಅವಕಾಶ ನೀಡಬೇಕು. ಮಹಾರಾಷ್ಟ್ರ ಮಾದರಿಯಲ್ಲಿ ಸಿಎಲ್-9ಗಳಲ್ಲಿ ಮದ್ಯ ಪಾರ್ಸಲ್ ಗೆ ಅವಕಾಶ ನೀಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಿಎಲ್-6ಎ ಮತ್ತು ಸಿಎಲ್-7 ಸನ್ನದು ಪ್ರಾರಂಭಿಸಲು ನೀಡಿರುವ ಆದೇಶ ರದ್ದುಗೊಳಿಸಲು ಆಗ್ರಹಿಸಿದರು.
ಎಂಎಸ್ಐಎಲ್ ಮಳಿಗೆ ತೆರೆಯುವುದನ್ನು ತಡೆಹಿಡಿಯಬೇಕು. ಮಿಲ್ಟ್ರಿ ಕ್ಯಾಂಟೀನ್ ಸ್ಟೋರ್ (ಸಿಎಲ್-8 ಮತ್ತು ಸಿಎಲ್-8ಎ) ಹೆಸರಿನಲ್ಲಿ ಸರಬರಾಜು ಆಗುತ್ತಿರುವ ಮದ್ಯಕ್ಕೆ ಕಡಿವಾಣ ಹಾಕಬೇಕು. ಹೋಟೆಲ್, ಅಂಗಡಿ, ಧಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಚಿಲ್ಲರೆ ಮದ್ಯ ಮಾರಾಟಗಾರರಿಗೆ 2009ರ ಪೂರ್ವದಲ್ಲಿ ನೀಡುತ್ತಿದ್ದಂತೆ ಶೇ.20 ಲಾಭಾಂಶಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬೇಡಿಕೆ ಸಂಬಂಧ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಸಲ್ಲಿಸಿದರು.
ಸಂಘದ ಅಧ್ಯಕ್ಷ ಪಿ.ನಾರಾಯಣರಾವ್, ಉಪಾಧ್ಯಕ್ಷ ಪ್ರಕಾಶ ಉಳ್ಳಾಗಡ್ಡಿ, ಕಾರ್ಯದರ್ಶಿ ವೈಜಿನಾಥ ಪಾಟೀಲ್, ಜಂಟಿ ಕಾರ್ಯದರ್ಶಿ ರವಿಕುಮಾರ ಬೋರಾಳೆ, ಖಜಾಂಚಿ ಸುಭಾಷ ಬಳ್ಳಿ, ಪ್ರಮುಖರಾದ ಚಂದ್ರಕಾಂತ ಸುಂಟೆ, ಮಲ್ಲಿಕಾರ್ಜುನ ಶೀಲವಂತ, ನಂದಕುಮಾರ ಜಮಗೀಕರ್, ಡಾ.ಜಗದೀಶ ಮರೂರ್, ಪ್ರವೀಣ, ಶರಣಬಸಪ್ಪ ಭೀಮಳ್ಳಿ, ಹರವೀಂದರ್ಸಿಂಗ್ ಎಚ್., ಪಿ.ಮಾಣಿಕರಾವ ಪದ್ಮಾಕಟ್ಟಿ ಇತರರಿದ್ದರು.