

ಕಲಬುರಗಿ: ಗುತ್ತಿಗೆದಾರ ಸಚಿನ ಪಾಂಚಾಳ ಆತ್ಮಹತ್ಯೆ ಡೆತ್‌ನೋಟ್‌ನಲ್ಲಿ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರಿಗೆ ಭದ್ರತೆ ನೀಡಬೇಕು, ಷಡ್ಯಂತ್ರ ರೂಪಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆಯಿಂದ ನಗರದದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರಕ್ಕೆ ಧಿಕ್ಕಾರ, ಪೊಲೀಸರಿಗೆ ಧಿಕ್ಕಾರ, ಭಾರತ ಮಾತಾ ಕಿ ಜೈ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಆಂದೋಲಾ ಸಿದ್ಧಲಿಂಗ ಸ್ವಾಮೀಜಿ ಜಿಲ್ಲೆಯಷ್ಟೇ ಅಲ್ಲ ರಾಜ್ಯಮಟ್ಟದಲ್ಲಿ ಹಿಂದುತ್ವದ ಧ್ವನಿಯಾಗಿ, ಅನ್ಯಾಯ, ಅಕ್ರಮಗಳ ವಿರುದ್ಧ ಹೋರಾಡುತ್ತ ಬಂದಿದ್ದಾರೆ. ನಿರಂತರವಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅನ್ಯಾಯಗಳ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಆದ್ದರಿಂದ ಅವರನ್ನು ಗುರಿ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಡೆತ್‌ನೋಟ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ ಮತ್ತು ಆತನ ಗ್ಯಾಂಗ್ ಕೂಡಿಕೊಂಡು ಕೊಲೆ ಮಾಡುವ ಸಂಚು ರೂಪಿಸಿರುವ, ಸುಫಾರಿ ನೀಡಿರುವ ಕುರಿತು ಉಲ್ಲೇಖಿಸಲಾಗಿದ್ದು, ಕೂಡಲೇ ಈ ಬಗ್ಗೆ ತನಿಖೆಯನ್ನು ಸಿಬಿಐಗೆ ವಹಿಸಬೇಕು, ಡೆತ್‌ನೋಟ್‌ನಲ್ಲಿ ಉಲ್ಲೇಖಿತ ಆರೋಪಿಗಳನ್ನು ಬಂಧಿಸಬೇಕು, ಸಚಿವ ಪ್ರಿಯಾಂಕ್ ಖರ್ಗೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸೇನೆ ಜಿಲ್ಲಾಧ್ಯಕ್ಷ ಮಹೇಶ ಗೊಬ್ಬುರ, ಮಲ್ಕಣ್ಣ ಹಿರೇಪೂಜಾರಿ, ಲಕ್ಷಿö್ಮÃಕಾಂತ ಸ್ವಾಧಿ, ಎಂ.ಎಸ್.ಪಾಟೀಲ್ ನರಿಬೋಳ, ಮಹೇಶ ಯಾದವ, ಮೌನೇಶ ಬಡಿಗೇರ, ಸಂತೋಷ ಹಿರೇಮಠ, ಅಂಬಾರಾಯ ಕಂಬಾರ, ಪರಮೇಶ್ವರ ಮೂಲಗೆ, ಶರಣು ಪಾಟೀಲ್, ತಾತಾಗೌಡ, ಅರುಣ ಸುಲ್ತಾನಪುರ, ಶರಣು ಗುತ್ತೇದಾರ್, ಮಡಿವಾಳ ಅಮರಾವತಿ, ರಾಕೇಶ ಜಮಾದಾರ, ಸಿದ್ದು ಪಾಟೀಲ್, ಈಶ್ವರ ಹಿಪ್ಪರಗಿ ಇತರರಿದ್ದರು.