

ಆಳಂದ: ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಪ್ರಕರಣದಲ್ಲಿ ಶ್ರೀರಾಮ ಸೇನೆ ರಾಜ್ಯ ಗೌರವಾಧ್ಯಕ್ಷರಾದ ಜೇವರ್ಗಿ ತಾಲೂಕಿನ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಬೀದರ್‌ನ ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್ ಹಾಗೂ ಚಂದ್ರಕಾAತ ಘೋಡಕೆ ಅವರಿಗೆ ಸ್ಥಳೀಯ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ.
ಇಲ್ಲಿನ ಲಾಡ್ಲೆ ಮಶಾಕ್ ದರ್ಗಾದಲ್ಲಿ ಇರುವ ಶಿವಲಿಂಗಕ್ಕೆ ಅಪಮಾನ ಮಾಡಲಾಗಿದ್ದು, ಸೂಕ್ತ ರಕ್ಷಣೆ ಕೊಡಬೇಕು ಎಂದು ಹಿಂದಿನ ಶಾಸಕ ಸುಭಾಷ ಗುತ್ತೇದಾರ್ ಅವರು ಸದನದಲ್ಲಿ ಮಾತನಾಡಿದ್ದರು. ಬಳಿಕ ಕೆಲ ಕಿಡಿಗೇಡಿಗಳು ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಸ್ಟ್ಗಳನ್ನು ಹರಿಬಿಟ್ಟಿದ್ದರು. ಇದನ್ನು ಖಂಡಿಸಿ 2021ರ ಜ.10ರಂದು ಆಂದೋಲಾ ಶ್ರೀ ಸೇರಿ ವಿವಿಧ ಮಠಾಧೀಶರು ಆಳಂದನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಶ್ರೀ ಸಿದ್ಧಲಿಂಗ ಸ್ವಾಮೀಜಿ, ಈಶ್ವರಸಿಂಗ್ ಠಾಕೂರ್, ಚಂದ್ರಕಾAತ ಘೋಡಕೆ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪ್ರಧಾನ ಸಿವಿಲ್ ನ್ಯಾಯಾಧೀಶ ಯಲ್ಲಪ್ಪ ಕಲ್ಲಾಪುರ ಅವರು ವಾದವನ್ನು ಆಲಿಸಿ, ಜಾಮೀನು ಮಂಜೂರು ಮಾಡಿದರು. ಶ್ರೀಗಳ ಪರ ಪುರುಷೋತ್ತಮ ವಿ.ಆಪ್ಟೆ ವಾದ ಮಂಡಿಸಿದರು.