ಆಂದೋಲನ ಮಾದರಿಯಲ್ಲಿ ಖಾತೆ, ಇ-ಸ್ವತ್ತು ಮಾಡಿಕೊಡಿ

6ark4
ಅರಕಲಗೂಡು ತಾಲೂಕು ಬನ್ನೂರು ಗ್ರಾಮದಲ್ಲಿ 25ಲಕ್ಷರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಪಂ ಕಟ್ಟಡವನ್ನು ಉದ್ಘಾಟಿಸಿ ಶಾಸಕ ಎ.ಮಂಜು ಉದ್ಘಾಟಿಸಿದರು. ಶೋಭಾ, ಮಹೇಶ್ ಇತರರಿದ್ದರು.
Published on

ಅರಕಲಗೂಡು : ಕಾನೂನು ಬಾಹಿರವಾಗಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಜಾಗವನ್ನು ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಇತರ ಉದ್ದೇಶಗಳಿಗೆ ಪರವಾನಗಿ ನೀಡಿ ವಿವಾದ ಮೈಮೇಲೆ ಎಳೆದುಕೊಳ್ಳದಂತೆ ಶಾಸಕ ಎ. ಮಂಜು ತಾಕೀತು ಮಾಡಿದರು.

ತಾಲೂಕಿನ ಬನ್ನೂರು ಗ್ರಾಮದಲ್ಲಿ ಇತ್ತೀಚೆಗೆ ನೂತನವಾಗಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಗ್ರಾಪಂ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಪಂ ಸದಸ್ಯರಿಂದ ಎಂಎಲ್‌ಎ ತನಕ ಮತ ನೀಡಿರುವವರು ಜನರೇ ಆಗಿರುತ್ತಾರೆ. ಜನರಿಂದ ಮತ ಪಡೆದಿರುವ ನಾವು ನಮ್ಮ ಜವಾಬ್ದಾರಿಯನ್ನು ಅರಿತು ಸೇವೆ ಮಾಡಬೇಕಿದೆ. ಯಾರೂ ಕೂಡ ತಮ್ಮ ಮನೆಯಿಂದ ಸವಲತ್ತುಗಳನ್ನು ಕೊಡಲ್ಲ. ಸರ್ಕಾರದಿಂದ ದೊರೆಯುವ ಸೌಕರ್ಯಗಳನ್ನು ಸಮರ್ಪಕವಾಗಿ ತಲುಪಿಸುವ ಕಾಯಕವನ್ನು ಕೈಗೊಂಡರೇ ಜನರ ವಿಶ್ವಾಸ ಉಳಿಸಿಕೊಂಡಂತಾಗುತ್ತದೆ ಎಂದು ಹೇಳಿದರು.

ಗ್ರಾಪಂ ವ್ಯಾಪ್ತಿಯ ಜನವಸತಿ ಪ್ರದೇಶಕ್ಕೆ ಮೂಲಸೌಕರ್ಯಗಳನ್ನು ನೀಡುವುದೇ ಆಡಳಿತದ ಕರ್ತವ್ಯ ಎಂದು ಭಾವಿಸಬಾರದು. ತುಂಬ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ವಾಸದ ಮನೆಗಳು, ನಿವೇಶನಗಳ ಖಾತೆ, ಇ-ಸ್ವತ್ತು ಮಾಡುವ ಕೆಲಸವನ್ನು ಆಂದೋಲನ ಮಾದರಿಯಲ್ಲಿ ಮಾಡಬೇಕಿದೆ. ಇದು ಆಯಾ ವಾರ್ಡ್‌ಗಳ ಸದಸ್ಯರಿಂದ ಆಗಬೇಕಿದೆ. ಪಿಡಿಒ ಸೇರಿ ಇತರ ಅಧಿಕಾರಿ, ಸಿಬ್ಬಂದಿ ಜನವಸತಿ ಪ್ರದೇಶಕ್ಕೆ ವಾರಕ್ಕೆ ಒಮ್ಮೆಯಾದರೂ ತೆರಳಿ ಈ ಕೆಲಸವನ್ನು ನಿರ್ವಹಿಸಬೇಕೆಂದು ಸೂಚನೆ ನೀಡಿದರು.

ಇದುವರೆಗೂ ಮನೆಗಳ ಖಾತೆ, ಇ-ಸ್ವತ್ತು ಮಾಡಿಸಿಕೊಳ್ಳದೇ ಇರುವವರು ತಮ್ಮ ಕುಟುಂಬ ನಿಖರ ಮಾಹಿತಿಯನ್ನು ದಾಖಲೆಗಳ ಮೂಲಕ ಸಲ್ಲಿಸಿ ಸ್ವತ್ತಿನ ಮಾಲೀಕತ್ವವನ್ನು ಪಡೆದುಕೊಳ್ಳಬೇಕು. ಕೇವಲ ಮಾತಿನ ಆರೋಪಕ್ಕೆ ಸೀಮಿತಗೊಳ್ಳದೆ ಪೂರಕವಾದ ದಾಖಲೆಗಳನ್ನು ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ಮಹೇಶ್, ಸದಸ್ಯರಾದ ರತ್ನಮ್ಮ, ಭಾಗ್ಯಮ್ಮ, ಮಾದೇವಿ, ಲಕ್ಷ್ಮೀ, ಲಕ್ಷ್ಮಮ್ಮ, ಲೋಕೇಶ, ಸುಂದ್ರೇಶ್, ಕಾಂತರಾಜು, ವೇಣುಗೋಪಾಲ್, ಪಿಡಿಒ ಚಂದ್ರಿಕಾ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net