ಆಂತರಿಕ ಸಂಪನ್ಮೂಲ ಬಳಕೆಗೆ ಪತ್ರ ; ವಿಶ್ವವಿದ್ಯಾಲಯದಲ್ಲಿ ಮತ್ತೆ ಭುಗಿಲೆದ್ದ ವಿವಾದ ; 28 ಕೋಟಿ ರೂ., ಮೂಲನಿಧಿ ಜೇನುಗೂಡಿಗೆ ಕೈ

1425720442tumkur1
Published on

ತುಮಕೂರು : ಹೊಸ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣಕ್ಕೆ ಆಂತರಿಕ ಸಂಪನ್ಮೂಲ ಬಳಸಲು ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ತುಮಕೂರು ವಿವಿ ಆಡಳಿತ ಮಂಡಳಿ ಪತ್ರ ಬರೆದಿರುವುದು ಮತ್ತೊಮ್ಮೆ ವಿವಾದ ಭುಗಿಲೇಳುವಂತೆ ಮಾಡಿದೆ. ಈ ನಡೆಯು ಅಧ್ಯಾಪಕರ ಸಂಘ ಹಾಗೂ ಕುಲಪತಿಗಳ ನಡುವಿನ ಸಂಘರ್ಷಕ್ಕೂ ನಾಂದಿಯಾಡಿದೆ.

‘ಆಂತರಿಕ ಸಂಪನ್ಮೂಲ ಬಳಕೆಗೆ ವಿರೋಧ’ ಶೀರ್ಷಿಕೆಯಡಿ ಜ.26ರಂದು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಅಲ್ಲದೆ, ಕುಲಸಚಿವರಿಗೆ ವಿವಿ ಅಧ್ಯಾಪಕರ ಸಂಘವು ಪತ್ರ ಬರೆದು ನೂತನ ಕ್ಯಾಂಪಸ್‌ನಲ್ಲಿ ಕಟ್ಟಡ ನಿರ್ಮಾಣಕ್ಕೆ ಆಂತರಿಕ ಸಂಪನ್ಮೂಲ ಬಳಸುವುದನ್ನು ಜ.28ರ ಸಿಂಡಿಕೇಟ್ ಸಭೆಯ ಮುಂದೆ ಪ್ರಸ್ತಾಪಕ್ಕೆ ತರದಂತೆ ಎಚ್ಚರಿಕೆ ಸಹ ನೀಡಿತ್ತು. ಹಾಗಾಗಿ, ಸಂಪನ್ಮೂಲ ಬಳಸುವ ವಿಷಯವನ್ನು ವಿವಿ ಸಿಂಡಿಕೇಟ್ ಸಭೆಯ ಅಜೆಂಡಾದಿಂದಲೇ ಕೈಬಿಡಲಾಗಿತ್ತು. ಇಷ್ಟೆಲ್ಲಾ ವಿರೋಧದ ನಡುವೆಯೂ ಉನ್ನತ ಶಿಕ್ಷಣ ಇಲಾಖೆ ಅಪರ ಕಾರ್ಯದರ್ಶಿಗೆ ಕಳೆದ ಶುಕ್ರವಾರ ವಿವಿ ಉಪ ಕುಲಸಚಿವರು ಸಂಪನ್ಮೂಲ ಬಳಕೆಗೆ ಅನುಮತಿ ಕೋರಿರುವುದು ವಿವಾದವು ಮತ್ತೆ ಹೊಗೆಯಾಡುವಂತೆ ಮಾಡಿದೆ.

ಸರ್ಕಾರದ ನಿರ್ದೇಶನ ಕೋರಿ ಪತ್ರ: ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಬಿದರೆಕಟ್ಟೆ ಬಳಿಯ ನೂತನ ಕ್ಯಾಂಪಸ್‌ನಲ್ಲಿ ಅಂದಾಜು 80 ಕೋಟಿ ರೂ., ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಯೋಜನೆ ರೂಪಿಸಲಾಗಿದ್ದು, ಕೇಂದ್ರ ಸರ್ಕಾರಿ ಸ್ವಾಮ್ಯದ ರೈಟ್ಸ್ ಲಿಮಿಟೆಡ್‌ಗೆ ಗುತ್ತಿಗೆ ವಹಿಸಲಾಗಿತ್ತು. ಕಳೆದ 4 ವರ್ಷಗಳಿಂದ ಗುತ್ತಿಗೆದಾರರಿಗೆ ನಯಾಪೈಸೆ ಬಿಡುಗಡೆ ಮಾಡದೆ ಇರುವುದರಿಂದ ತುರ್ತು ಗುತ್ತಿಗೆ ಸಂಸ್ಥೆಗೆ ಹಣ ಬಿಡುಗಡೆ ಮಾಡಲು ಈಗ ಆಂತರಿಕ ಸಂಪನ್ಮೂಲ ಬಳಕೆ ಮಾಡಿಕೊಳ್ಳಲು ಸರ್ಕಾರದ ನಿರ್ದೇಶನ ಕೋರಿ ವಿವಿ ಆಡಳಿತ ಮಂಡಳಿ ಪತ್ರ ಬರೆದಿದೆ.

2017-18ನೇ ಸಾಲಿನಲ್ಲಿ 10 ಕೋಟಿ ರೂ., 2018-19ನೇ ಸಾಲಿಗೆ 15 ಕೋಟಿ ರೂ., ಹಾಗೂ 2020-21ನೇ ಸಾಲಿಗೆ 15 ಕೋಟಿ ರೂ., ಒಟ್ಟು 40 ಕೋಟಿ ರೂಪಾಯಿ ಬಿಡುಗಡೆ ಮಾಡಲು ಸರ್ಕಾರದ ಅನುಮೋದನೆ ಕೋರಲಾಗಿತ್ತು. 4 ವರ್ಷಗಳಾದರೂ ಈವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಈ ಹಿಂದೆ ಆರಂಭದಲ್ಲಿ ವಿವಿ ಆಂತರಿಕ ಸಂಪನ್ಮೂಲದಿಂದ 12 ಕೋಟಿ ರೂಪಾಯಿಯನ್ನು ರೈಟ್ಸ್ ಸಂಸ್ಥೆಗೆ ಬಿಡುಗಡೆ ಮಾಡಲಾಗಿದ್ದು, 4 ವರ್ಷಗಳಿಂದ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಗುತ್ತಿಗೆದಾರರು 14 ಕೋಟಿ ಹಣ ಬಿಡುಗಡೆಗೆ ಕೋರಿದ್ದಾರೆ. ಕಳೆದೆರಡು ವರ್ಷಗಳಿಂದ ಕರೊನಾ ನೆಪವೊಡ್ಡಿ ಸರ್ಕಾರದಿಂದ ಯಾವುದೇ ಅನುದಾನವೂ ಬಂದಿಲ್ಲದ ಕಾರಣ ಅನಿವಾರ್ಯವಾಗಿ ಆಂತರಿಕ ಸಂಪನ್ಮೂಲವೆಂಬ ವಿವಾದದ ಜೇನುಗೂಡಿಗೆ ಆಡಳಿತ ಮಂಡಳಿ ಮತ್ತೆ ಕೈಯಿಟ್ಟಿದೆ.

ಉಪ ಕುಲಸಚಿವರ ಕೈಯಲ್ಲಿ ಪತ್ರ ! ; ವಿವಿ ಸಿಂಡಿಕೇಟ್ ಸದಸ್ಯರು ಹಾಗೂ ವಿವಿ ಅಧ್ಯಾಪಕರ ಸಂಘದ ತೀವ್ರ ವಿರೋಧದ ನಡುವೆಯೂ ಆಂತರಿಕ ಸಂಪನ್ಮೂಲ 28 ಕೋಟಿ ರೂ.,ಗಳನ್ನು ಹೊಸ ವಿವಿ ಆವರಣದ ಕಟ್ಟಡ ಕಾಮಗಾರಿ ಗುತ್ತಿಗೆದಾರ ಸಂಸ್ಥೆಯಾದ ರೈಟ್ಸ್ ಲಿಮಿಟೆಡ್‌ಗೆ ಪಾವತಿಸಲು ವಿವಿ ಆಡಳಿತ ಮಂಡಳಿ ಮುಂದಾಗಿದೆ. ಉಪ ಕುಲಸಚಿವ (ಅಭಿವೃದ್ಧಿ) ಡಿ.ಸುರೇಶ್ ಅವರು ಆಂತರಿಕ ಸಂಪನ್ಮೂಲ ಬಳಕೆಗೆ ಸರ್ಕಾರ ಮಾರ್ಗಸೂಚಿ ಕೋರಿ ಉನ್ನತ ಶಿಕ್ಷಣ ಇಲಾಖೆ ಅಪರ ಕಾರ್ಯದರ್ಶಿಗೆ ಫೆ.4ರಂದು ಪತ್ರ ಬರೆದಿದ್ದಾರೆ. ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ ರಜೆ ಮೇಲೆ ತೆರಳಿದ್ದಾಗ ಒತ್ತಡ ಹೇರಿ ಉಪಕುಲಸಚಿವರ ಕೈಯಲ್ಲಿ ಪತ್ರ ಬರೆಸಿರುವುದು ಅಧ್ಯಾಪಕರ ಸಂಘದ ಆಕ್ರೋಶಕ್ಕೆ ಕಾರಣವಾಗಿದೆ

ವಿವಿ ಅಧ್ಯಾಪಕರ ಸಂಘದ ಆಕ್ಷೇಪ ; ಕರ್ನಾಟಕ ವಿವಿ ಕಾಯ್ದೆಯ ಪ್ರಕಾರ ಉಪಕುಲಸಚಿವರು ಯಾವುದೇ ಕಾರಣಕ್ಕೂ ಕುಲಸಚಿವರ ಪ್ರಭಾರ ಆಗಿ ಕಾರ್ಯನಿರ್ವಹಿಸಲು ಬರುವುದಿಲ್ಲ. ಆದರೂ, ಸರ್ಕಾರಕ್ಕೆ ಉಪಕುಲಸಚಿವರ ಕೈಯಲ್ಲಿ ಪತ್ರ ಬರೆಸಿರುವುದು ಹಲವು ಅನುಮಾಗಳನ್ನು ಹುಟ್ಟುಹಾಕಿದೆ. ಇನ್ನೊಂದು ತಿಂಗಳ ಸೇವಾವಧಿ ಹೊಂದಿರುವ ಕುಲಪತಿಗಳ ಆದೇಶದಂತೆ ಬರೆದಿರುವ ಪತ್ರಕ್ಕೆ ಯಾವುದೇ ಮನ್ನಣೆ ನೀಡದಂತೆ ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗೆ ವಿವಿ ಅಧ್ಯಾಪಕರ ಸಂಘವು ಪತ್ರ ಬರೆದಿರುವುದು ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಕಳೆದ 3 ವರ್ಷದಿಂದಲೂ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಆಂತರಿಕ ಸಂಪನ್ಮೂಲ ನಿಧಿ ಬಳಸದೆ ಶಿಕ್ಷಣದ ಗುಣಮಟ್ಟ ಕುಸಿದಿದೆ ಎಂಬ ಕಾರಣಕ್ಕೆ ಕಟ್ಟಡ ಕಾಮಗಾರಿಗೆ ಹಣ ಬಳಕೆಗೆ ವಿವಿ ಸಿಂಡಿಕೇಟ್ ಒಪ್ಪಿಗೆ ನೀಡಿಲ್ಲ. ಇಷ್ಟಾದರೂ ಸಿಂಡಿಕೇಟ್ ಒಪ್ಪಿಗೆ ಪಡೆಯದೆ ತರಾತುರಿಯಲ್ಲಿ ಕುಲಪತಿಗಳು ಸರ್ಕಾರಕ್ಕೆ ಪತ್ರ ಬರೆದಿರುವುದು ಅನುಮಾನಕ್ಕೆ ದಾರಿಮಾಡಿಕೊಟ್ಟಿದೆ. ಕುಲಸಚಿವರು ರಜೆಯಲ್ಲಿದ್ದಾಗ ಪತ್ರ ಬರೆಯುವ ತುರ್ತು ಏನಿತ್ತು ಎಂಬುದು ಪ್ರಶ್ನೆಯಾಗಿದೆ. ವಿವಿ ಆಂತರಿಕನಿಧಿ ವಿದ್ಯಾರ್ಥಿಗಳಿಗೆ ಬಳಕೆಯಾಗಬೇಕು. ಟಿ.ಎಸ್.ಸುನಿಲ್‌ಪ್ರಸಾದ್, ಸಿಂಡಿಕೇಟ್ ಸದಸ್ಯ, ತುಮಕೂರು ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net