

ಕುಶಾಲನಗರ: ಮಕ್ಕಳ ಕಲಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಚಾಲನೆ ನೀಡಿದರು.
ತಾಲೂಕಿನಲ್ಲಿ 15 ಕ್ಲಸ್ಟರ್‌ಗಳಿದ್ದು, ಎಲ್ಲೆಡೆ ಕಲಿಕಾ ಹಬ್ಬ ಆಚರಿಸಲಾಗುತ್ತಿದೆ. ಮಕ್ಕಳ ಆಂತರಿಕ ಪ್ರಜ್ಞೆಯನ್ನು ಬೆಳೆಸುವ ಕಾರ್ಯಕ್ರಮವಿದು. ಮಕ್ಕಳಲ್ಲಿ ಇರುವ ಅದ್ಭುತ ಶಕ್ತಿಯನ್ನು ಉದ್ದೀಪನಗೊಳಿಸುವ ಮೂಲಕ ಸಮಾಜದ ಮುಂದಿನ ರೂವಾರಿಗಳಾಗಿಸುವುದು ನೂತನ ಶಿಕ್ಷಣ ನೀತಿಯ ಭಾಗವಾಗಿದೆ ಎಂದು ಅವರು ಹೇಳಿದರು.
ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಬಿ.ಎನ್.ಪುಷ್ಪಾ, ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ, ಪುರಸಭೆ ಉಪಾಧ್ಯಕ್ಷೆ ಸುರಯ್ಯಭಾನು, ಶಿಕ್ಷಣ ಸಂಯೋಜಕ ರಾಧಾಕೃಷ್ಣ, ಕ್ಷೇತ್ರ ಸಂಪನ್ಮೂಲ ಶಿಕ್ಷಕ ಲೋಕೇಶ್, ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ರಾಣಿ, ಮೌಲಾನ ಶಾಲೆ ಮುಖ್ಯ ಶಿಕ್ಷಕಿ ಶ್ವೇತಾ, ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಉಪಪ್ರಾಂಶುಪಾಲ ಪರಮೇಶ್ವರಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸಮೀರಾ, ದಾನಿ ಸೂದನ ರತ್ನಾವತಿ, ಕೆ.ಎನ್.ದೇವರಾಜು, ಕಲಿಕಾ ಹಬ್ಬದ ಸಂಯೋಜಕರಾದ ಜಲಜಾಕ್ಷಿ, ನಂದಿನಿ, ಭಾರತಿ, ಭಾಗ್ಯಮ್ಮ, ಶಿವಣ್ಣ ಇತರರು ಹಾಜರಿದ್ದರು.