

ಬಾಗಲಕೋಟೆ: ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ನೇತೃತ್ವದಲ್ಲಿ ಆ.೨೭ ರಂದು ಬೆಂಗಳೂರಿನಲ್ಲಿ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಜಿಲ್ಲಾ ಮುಖಂಡರಾದ ರವೀಂದ್ರ ಕಲಬುರ್ಗಿ, ದ್ಯಾಮಣ್ಣ ಗಾಳಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ತೇಜೋವಧೆ ಖಂಡಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವುದನ್ನು ವಿರೋಧಿಸಿ ಬಿಜೆಪಿ, ಪ್ರಜಾಪ್ರಭುತ್ವ ರಕ್ಷಣೆಗಾಗಿ ಈ ಹೋರಾಟ ನಡೆಯುತ್ತಿದೆ. ಅಂದು ಬೆಳಗ್ಗೆ ೧೧ ಗಂಟೆಗೆ ಬೆಂಗಳೂರಿನ ಪ್ರೀಡಂ ಪಾರ್ಕ ಮೈದಾನದಿಂದ ರಾಜಭವನ ವರೆಗೆ ಪಾದಯಾತ್ರೆ ನಡೆಯಲಿದೆ ಎಂದರು.
ರಾಜ್ಯಪಾಲ ಥಾವರಚಂದ ಗೆಹ್ಲೋಟ ಸಿಎಂ ಸಿದ್ದರಾಮಯ್ಯ ಮೇಲೆ ಪ್ರಾಸಿಕ್ಯೂಶನ್ ನೀಡಿರುವುದು ಸಂಪೂರ್ಣ ಸಂವಿಧಾನ ಬಾಹಿರವಾಗಿದೆ. ಬಿಜೆಪಿ, ಜೆಡಿಎಸ್ ತಾಳಕ್ಕೆ ರಾಜ್ಯಪಾಲರು ಕುಣಿಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ದೊಡ್ಡ ಷಡ್ಯಂತರ ರೂಪಿಸಿದ್ದಾರೆ. ಭ್ರಷ್ಟ ಬಿಜೆಪಿ, ಜೆಡಿಎಸ್ ಹುನ್ನಾರ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಮಹಾದೇವ ಹಾದಿಮನಿ ಮಾತನಾಡಿ, ಕರ್ನಾಟಕ ಲೋಕಾಯುಕ್ತ, ಎಸ್‌ಐಟಿ ಮುಂತಾದ ತನಿಖಾ ಸಂಸ್ಥೆಗಳು ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಸಾಬೀತದಾ ಪ್ರಮುಖರಾದ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ಧರೆಡ್ಡಿ ಅವರ ಮೇಲೆ ಯಾವುದೇ ಅನುಮತಿ ನೀಡಿಲ್ಲ. ಸಿಎಂ ಸಿದ್ದರಾಮಯ್ಯ ಸೂಜಿಯಷ್ಟು ತಪ್ಪು ಮಾಡಿಲ್ಲ. ಕೇಂದ್ರ ಸರ್ಕಾರವು ರಾಜಭವನವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.
ಜಿ.ಪಂ ಮಾಜಿ ಅಧ್ಯಕ್ಷ ಬಾಯಕ್ಕ ಮೇಟಿ, ರಾಜು ಮನ್ನಿಕೇರಿ, ಹಾಜಿಸಾಬ ದಂಡಿನ, ಸಾಗರ ಕಳ್ಳೆಮನೆ ಇತರರು ಇದ್ದರು.