

ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಕೊಡವ ಪಂಚಾಂಗದ ಸಾರ್ವತ್ರಿಕ ಕಕ್ಕಡ ಪದ್‌ನೆಟ್ ಆಚರಣೆ ಆ.೨ ರಂದು ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್‌ನಲ್ಲಿ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ೨೮ನೇ ವರ್ಷದ ಸಾರ್ವತ್ರಿಕ ಕಕ್ಕಡ ಪದ್‌ನೆಟ್ ಆಚರಣೆ ಇದಾಗಿದೆ. ಕೊಡವ ಸಂಸ್ಕೃತಿ, ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಉದ್ದೇಶದಿಂದ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಕ್ಕಡ ಪದ್‌ನೆಟ್ ಆಚರಣೆ ಕೊಡವ ಕರೋಣರ (ಅಂದರೆ ಕೊಡವ ಪೂರ್ವಜರು) ಆವಿಷ್ಕಾರವಾಗಿದೆ. ಇದನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಾರ್ವತ್ರಿಕಗೊಳಿಸಿ ವಿಶ್ವ ಮಟ್ಟದಲ್ಲಿ ಕೊಡವ ಸಂಪ್ರದಾಯವನ್ನು ಪರಿಚಯಿಸಿದೆ. ತಾಯಿ ಜಲದೇವತೆ ಕಾವೇರಿ ಹಾಗೂ ಭೂದೇವಿಯೊಂದಿಗೆ ಮುರಿಯಲಾಗದ ಕೊಡವ ಬಂಧನವನ್ನು ಕಕ್ಕಡ ಪದ್‌ನೆಟ್ ಸೂಚಿಸುತ್ತದೆ. ಇದು ಕೊಡವ ಬುಡಕಟ್ಟು ಪ್ರಪಂಚದ ಜಾನಪದ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ೧೦.೩೦ ಗಂಟೆಗೆ ಸಾರ್ವಜನಿಕ ನಾಟಿನಾಡ್ಪ ಸಮಾರಂಭ(ಭತ್ತ ನಾಟಿ) ಕಾರ್ಯಕ್ರಮ ಕ್ಯಾಪಿಟಲ್ ವಿಲೇಜ್ ಗದ್ದೆಯಲ್ಲಿ ದುಡಿಕೊಟ್ ಪಾಟ್‌ನೊಂದಿಗೆ ನಡೆಯಲಿದೆ. ಭತ್ತದ ನಾಟಿ ಮಾಡಿದ ನಂತರ ಭಾಗವಹಿಸಿದ ಎಲ್ಲರೂ ಕಕ್ಕಡಕೋಳಿ, ಮದ್ದ್ ಪುಟ್ಟ್, ಮದ್ದ್ ಪಾಯಸ ಮತ್ತಿತರ ಕೊಡವ ಸಾಂಪ್ರದಾಯಿಕ ಖಾದ್ಯಗಳನ್ನು ಸೇವಿಸುವರು. ಕಕ್ಕಡ ಸಮಾರಂಭ ಸೂರ್ಯ-ಚಂದ್ರ, ಜಲದೇವತೆ ಕಾವೇರಿ ಹಾಗೂ ಗುರು ಕಾರೋಣರ ಆಶೀರ್ವಾದವನ್ನು ಪಡೆಯುವ ಮೂಲಕ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಕೊಡವ ಬುಡಕಟ್ಟು ಪ್ರಪಂಚದ ಭೂಮಿ, ಭಾಷೆ, ಸಂಸ್ಕೃತಿ, ಜನಾಂಗೀಯ ಹೆಗ್ಗುರುತು ಇತ್ಯಾದಿಗಳಿಗೆ ಸಾಂವಿಧಾನಿಕ ಖಾತರಿಯ ಜಾಗೃತಿಯ ಕಾರ್ಯಕ್ರಮ ಇದಾಗಲಿದ್ದು, ಕೊಡವರು ಹಾಗೂ ಕೊಡವತಿಯರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.