ಆ ಮುಖಂಡನಿಂದ ನೈತಿಕ ಪಾಠ ಕಲಿಯುವ ಅಗತ್ಯವಿಲ್ಲ: ಸಮಿವುಲ್ಲಾ ಆಕ್ರೋಶ

ಆ ಮುಖಂಡನಿಂದ ನೈತಿಕ ಪಾಠ ಕಲಿಯುವ ಅಗತ್ಯವಿಲ್ಲ: ಸಮಿವುಲ್ಲಾ ಆಕ್ರೋಶ
Published on

ಹಾಸನ: ಬಿಜೆಪಿಗೆ ವಂಚಿಸಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಮುಖಂಡನಿಂದ ನೈತಿಕ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ವಿರುದ್ಧ ಅರಸೀಕೆರೆ ನಗರಸಭೆ ನೂತನ ಅಧ್ಯಕ್ಷ ಸಮಿವುಲ್ಲಾ ಆಕ್ರೋಶ ವ್ಯಕ್ತಪಡಿಸಿದರು.
ನನ್ನ ನೈತಿಕತೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವರಿಗೆ ನಿಜವಾಗಿಯೂ ನೈತಿಕತೆ ಇದೆಯಾ? ಕುಮಾರಸ್ವಾಮಿ ಸರ್ಕಾರವನ್ನು ತೆಗೆದು, ಬಿಜೆಪಿಗೆ ದ್ರೋಹ ಬಗೆದು, ಬಿಎಸ್‌ವೈ ಕುಟುಂಬಕ್ಕೆ ಅನ್ಯಾಯ ಮಾಡಿ, ಸಾಕಷ್ಟು ಅವ್ಯವಹಾರ ನಡೆಸಿರುವ ಅವರು ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ನಾನು 35 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿದ್ದು, ಯಾವುದು ಒಂದು ಕಪ್ಪು ಚುಕ್ಕಿ ಇಲ್ಲದೆ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಎನ್.ಆರ್.ಸಂತೋಷ್ ಹೆಸರೇಳದೆ ಕಿಡಿಕಾರಿದರು.
ಅರಸೀಕೆರೆಗೆ ಬಂದಾಗಿನಿಂದ ಸಮಾಜಗಳ ನಡುವೆ ದ್ವೇಷದ ಭಾವನೆಯನ್ನು ಬಿತ್ತುವ ಮೂಲಕ ಜನರ ನಡುವೆ ಗಲಾಟೆ ಮಾಡಿಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಇದ್ದಾಗ ಒಂದು ದಿನದಲ್ಲಿ ಜೆಡಿಎಸ್‌ಗೆ ಸೇರಿಕೊಂಡಿರುವ ಇವರಿಗೆ ಯಾವ ನೈತಿಕತೆ ಇದೆ. ಇವರು ನಮ್ಮ ಪಕ್ಷಕ್ಕೆ ಬಂದ ಮೇಲೆ ಪಕ್ಷವನ್ನು ಸಂಪೂರ್ಣವಾಗಿ ಮುಗಿಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಬಾರಿ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಏಳು ಜನ ಜೆಡಿಎಸ್ ಮುಖಂಡರನ್ನು ಕರೆದುಕೊಂಡು ಹೋಗಿ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿದರು. ಈ ಬಾರಿಯ ಚುನಾವಣೆಯಲ್ಲಿ ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷೃ ಮಾಡಿದ್ದರಿಂದ ಎಲ್ಲ ಜೆಡಿಎಸ್ ಸದಸ್ಯರು ಒಗ್ಗಟ್ಟಿನಿಂದ ಒಮ್ಮತದಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ. ನಾನು ಇಂದಿಗೂ ಕೂಡ ಜೆಡಿಎಸ್‌ನಲ್ಲಿ ಇದ್ದೇನೆ. ಮುಂದೆಯೂ ಕೂಡ ಜೆಡಿಎಸ್‌ನಲ್ಲೇ ಇರುತ್ತೇನೆ. ನಾನು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ. ನಾನು ಜೆಡಿಎಸ್ ಪಕ್ಷದಿಂದಲೇ ಆಯ್ಕೆಯಾಗಿರುವುದು ಎಂದು ಸ್ಪಷ್ಟಪಡಿಸಿದರು.
ವಿಧಾನಸಭೆ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದರೂ ನಾವು ಪಕ್ಷ ನಿಷ್ಠರಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ಅರಸೀಕೆರೆಯ ಸಮಗ್ರ ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಈಗ ಎಲ್ಲ ಸದಸ್ಯರ ಸಹಕಾರದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಆದರೆ ನನ್ನ ಏಳಿಗೆಯನ್ನು ಸಹಿಸದೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ನಮ್ಮ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಅವರು ಕಾನೂನು ಹೋರಾಟ ಮಾಡಿದರೆ ನಾವು ಕೂಡ ಕಾನೂನು ಹೋರಾಟ ಎದುರಿಸಲು ಸಿದ್ಧರಿದ್ದೇವೆ. ನಾವು ಯಾವುದೇ ರೀತಿ ಪಕ್ಷಕ್ಕೆ ದ್ರೋಹ ಬಗೆದಿಲ್ಲ, ವಿರೋಧ ಚಟುವಟಿಕೆ ನಡೆಸಿಲ್ಲ ಮತ್ತು ಬೇರೆ ಪಕ್ಷದ ಜತೆ ಗುರುತಿಸಿಕೊಂಡಿಲ್ಲ. ನಮ್ಮನ್ನು ಕಡೆಗಣಿಸಿದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಮತ್ತೆ ಮೂರನೇ ಬಾರಿಗೆ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು
ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ಮನೋಹರ್, ಗಣೇಶ್, ಜಾಕಿರ್ ಹುಸೇನ್, ಹರೀಶ್ ಇತರದಿದ್ದರು.

ಆರೋಪ ಸಾಬೀತಾದರೆ ರಾಜೀನಾಮೆ ನೀಡುವೆ
ನಾನು ಹಗರಣಗಳನ್ನು ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ಆ ಬಗ್ಗೆ ಸಾಕ್ಷಿ ಸಮೇತ ತೋರಿಸಲಿ ನಾನು ರಾಜೀನಾಮೆ ನೀಡಿ, ರಾಜಕೀಯ ಜೀವನದಿಂದ ಹಿಂದೆ ಸರಿಯುತ್ತೇನೆ. ನನ್ನ ಬಗ್ಗೆ ಆರೋಪ ಮಾಡುವ ಬದಲು ಅವರು ಏನು ಮಾಡಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಈಶ್ವರಪ್ಪ ಅವರ ಆಪ್ತ ಸಹಾಯಕರ ಮೇಲೆ ಆಗಿರುವಂತಹ ಪ್ರಕರಣ ಇನ್ನು ತನಿಖೆ ನಡೆಯುತ್ತಿದೆ. ಅಲ್ಲದೆ ಮೈಸೂರು ಮತ್ತು ಇನ್ನಿತರ ಕಡೆ ಆಗಿರುವಂತಹ ಅಕ್ರಮಗಳ ಬಗ್ಗೆ ತನಿಖೆ ನಡೆಯುತ್ತಿದೆ. ಮೊದಲು ಅದನ್ನು ಸರಿಪಡಿಸಿಕೊಳ್ಳಲಿ ಎಂದು ಎಂದು ಸಮಿವುಲ್ಲಾ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net