ಆ.8ಕ್ಕೆ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಹಳೆ; ತೀರ್ಥಹಳ್ಳಿವರೆಗೆ ಪಾದಯಾತ್ರೆ

TTH WEB
Published on

ತೀರ್ಥಹಳ್ಳಿ: ಸರ್ಕಾರದ ಜನವಿರೋಧಿ ನೀತಿ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಬದುಕು ದಾರುಣವಾಗುತ್ತಿದೆ. ವನ್ಯಜೀವಿಗಳ ಉಪಟಳದಿಂದ ತಾಲೂಕಿನ ರೈತರು ಕೂಡ ಹೈರಾಣಾಗಿದ್ದು ಈ ಬಗ್ಗೆ ಸರ್ಕಾರದ ವೈಫಲ್ಯವನ್ನು ಖಂಡಿಸಿ ಆಗಸ್ಟ್ 8ರಂದು ತಾಲೂಕಿನ ಮೇಗರವಳ್ಳಿಯಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಸೋಮವಾರ ಕಾಂಗ್ರೆಸ್‌ನಿಂದ ಸರ್ಕಾರಕ್ಕೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿ ಮಾತನಾಡಿ, ತಾಲೂಕಿನ ಆಗುಂಬೆ ಮತ್ತು ಮಂಡಗದ್ದೆ ಹೋಬಳಿಯ ಸಿಂಗನಬಿದಿರೆ ಗ್ರಾಪಂ ವ್ಯಾಪ್ತಿಯಲ್ಲಿ ಆನೆಗಳ ಹಾವಳಿಯಿಂದ ರೈತರ ಜಮೀನುಗಳಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿರುವುದಲ್ಲದೆ ಪ್ರಾಣ ಹಾನಿಯಾಗಿದ್ದರೂ ಸರ್ಕಾರ ಕ್ರಮಕೈಗೊಂಡಿಲ್ಲ. ಮಂಗಗಳ ಹಾವಳಿಯೂ ತೀವ್ರವಾಗಿದ್ದು ಕಾಡುಪ್ರಾಣಿಗಳಿಂದ ಆಗಿರುವ ಹಾನಿಗೆ ಸೂಕ್ತ ಪರಿಹಾರವೂ ದೊರಕುತ್ತಿಲ್ಲ. ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಅತಿವೃಷ್ಟಿಯಿಂದ ಕಳೆದ ಸಾಲಿನಲ್ಲಿ ಮನೆ ಮತ್ತು ಕೃಷಿ ಭೂಮಿಗೆ ಉಂಟಾಗಿರುವ ಹಾನಿಗೆ ಪರಿಹಾರ ಬಂದಿಲ್ಲ. ಈ ವರ್ಷ ಆಗಿರುವ ಹಾನಿಗೂ ತುರ್ತು ಪರಿಹಾರ ನೀಡಬೇಕು. 800 ರೂ.ಗಳಿದ್ದ ರಸಗೊಬ್ಬರದ ಬೆಲೆ 1,800ಕ್ಕೆ ಏರಿಕೆಯಾಗಿದ್ದು ಕೃತಕ ಅಭಾವವೂ ಸೃಷ್ಟಿಯಾಗಿದೆ. ಕಸ್ತೂರಿ ರಂಗನ್ ವರದಿ ಅಧಿಸೂಚನೆಯನ್ನು ಜಾರಿಗೊಳಿಸಬಾರದು. ಜಿಎಸ್‌ಟಿ ಹೇರಿಕೆಯಿಂದ ಜನಸಾಮಾನ್ಯರು ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು ಇದನ್ನು ಕೂಡಲೆ ಜಾರಿಗೆ ಬರುವಂತೆ ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net