

ಸುಂಟಿಕೊಪ್ಪ: ಇಲ್ಲಿನ ಗ್ರಾಮ ಪಂಚಾಯಿತಿಯ 2ನೇ ಅವಧಿಗೆ ಅಧ್ಯಕ್ಷ ಸ್ಥಾನ ಬಿಸಿಎಂ (ಎ) ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಆ.3ರಂದು ಚುನಾವಣೆ ನಡೆಯಲಿದೆ.
ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿ ಶಿವಮ್ಮ ಮಹೇಶ್ ಮತ್ತು ಉಪಾಧ್ಯಕ್ಷರಾಗಿ ಪ್ರಸಾದ್ ಕುಟ್ಟಪ್ಪ ಕಾರ್ಯ ನಿರ್ವಹಿಸಿದ್ದು, ಇದೀಗ ಇವರಿಬ್ಬರೂ ತಮ್ಮ ಸ್ಥಾನವನ್ನು ಅದಲು ಬದಲು ಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿರುವುದರಿಂದ ಪಂಚಾಯಿತಿ ಚುನಾವಣೆ ರಂಗು ಪಡೆದಿದೆ. ಒಟ್ಟು 20 ಸದಸ್ಯ ಬಲವಿರುವ ಪಂಚಾಯಿತಿಯಲ್ಲಿ 11 ಸದಸ್ಯರು ಮೀಸಲಾತಿಯಡಿ ಅಧ್ಯಕ್ಷರಾಗಲು ಅವಕಾಶವಿದ್ದು, ಮೂವರು ಮಹಿಳೆಯರು ಉಪಾಧ್ಯಕ್ಷರಾಗಲು ಅವಕಾಶ ಪಡೆದಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಮತ್ತು ಎಸ್‌ಡಿಪಿಐನ ತಲಾ 4 ಬೆಂಬಲಿತ ಸದಸ್ಯರನ್ನು ಹೊಂದಿದ್ದು, ಉಳಿದ 8 ಸದಸ್ಯರು ಬಿಜೆಪಿ ಬೆಂಬಲಿತರಾಗಿದ್ದಾರೆ.
ಮೇಲ್ನೋಟಕ್ಕೆ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಮುಂಚೂಣಿಯಲ್ಲಿದ್ದು, ಇವರೊಂದಿಗೆ ರಫೀಕ್‌ಖಾನ್, ಆಲಿಕುಟ್ಟಿ, ಶಬ್ಬೀರ್ ತೀವ್ರ ಪೈಪೊಟ್ಟಿಯಲ್ಲಿದ್ದಾರೆ. ಈ ನಾಲ್ವರು ಪೈಕಿ ಪ್ರಸಾದ್ ಶಬ್ಬೀರ್ ಪಕ್ಷೇತರರಾಗಿದ್ದು, ರಫೀಕ್‌ಖಾನ್ ಮತ್ತು ಆಲಿಕುಟ್ಟಿ ಕಾಂಗ್ರೆಸ್ ಬೆಂಬಲಿತರಾಗಿದ್ದಾರೆ. ಬಿಜೆಪಿ ಬೆಂಬಲಿತ ಸದಸ್ಯರಲ್ಲಿ 3ನೇ ಬಾರಿ ಸದಸ್ಯರಾಗಿರುವ ಬಿ.ಎಂ.ಸುರೇಶ್ (ಪುಟ್ಟ), ಪಿ.ಆರ್.ಸುನೀಲ್ ಕುಮಾರ್, ಮಂಜು ಅಕಾಂಕ್ಷಿಗಳಾಗಿದ್ದಾರೆ.
ಕಳೆದ 2 ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ನಡೆಸಲು ಎಸ್‌ಡಿಪಿಐ ಬೆಂಬಲಿತ ಸದಸ್ಯರ ಕೊಡುಗೆ ಅಪಾರವಾಗಿದ್ದು, ಈ ಬಾರಿ ಎಸ್‌ಡಿಪಿಐ ನಿಂದ 2ನೇ ಬಾರಿ ಸದಸ್ಯರಾಗಿರುವ ನಾಗರತ್ನಾ ಅವರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತರು ಸಹಕಾರ ನೀಡಿ ಅಧ್ಯಕ್ಷ ಸ್ಥಾನ ಕೊಡಬೇಕೆಂದು ಎಸ್‌ಡಿಪಿಐ ಸಭೆಯಲ್ಲಿ ತೀರ್ಮಾನವಾಗಿದೆ ಎಂದು ಮೂಲಗಳು ತಿಳಿಸಿವೆ. ಉಪಾಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷೆ ಶಿವಮ್ಮ ಮಹೇಶ್ ಸೇರಿದಂತೆ ಗೀತಾ ಮತ್ತು ವಸಂತಿ ಅಕಾಂಕ್ಷಗಳಾಗಿದ್ದಾರೆ.