ಆ.29ರಿಂದ ರಾಯರ ಆರಾಧನಾ ಮಹೋತ್ಸವ

16-08-Shiva-1
ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಆ.29 ರಿಂದ ಸೆ.4ರವರೆಗೆ ಏಳು ದಿನಗಳವರೆಗೆ ರಾಯರ 352ನೇ ಆರಾಧನಾ ಮಹೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದೆ ಎಂದು ಶ್ರೀಮಠ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ತಿಳಿಸಿದರು.
ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಏಳು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಗ್ರಂಥಗಳ ಲೋಕಾರ್ಪಣೆ ಮತ್ತು ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಆ.29ರಂದು ಧ್ವಜಾರೋಹಣ, ಗೋ, ಧಾನ್ಯ, ಲಕ್ಷ್ಮಿ ಪೂಜೆ ಮೂಲಕ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತಿದ್ದು, ಆ.30ರಂದು ಶಾಖೋತ್ಸವ ನಡೆಯಲಿದೆ. ಆ.31ರಂದು ಪೂರ್ವಾರಾಧನೆ ನಿಮಿತ್ತ ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಮೂಲ ರಾಮದೇವರ ಪೂಜೆ ನಡೆಯಲಿದೆ.
ಸಂಜೆ ಯೋಗೀಂದ್ರ ಸಭಾ ಮಂಟಪದಲ್ಲಿ ಕರ್ನಾಟಕದ ವಿದ್ವಾನ್ ರಾಮ ವಿಠ್ಠಲಾಚಾರ್ಯ, ಆಂಧ್ರದ ವಿದ್ವಾನ್ ಗರಕಿಪಾಟಿ ನರಸಿಂಹರಾವ್, ಮುಂಬೈನ ಉದ್ಯಮಿ ಎನ್.ಚಂದ್ರಶೇಖರನ್, ಪುಣೆಯ ಎಂಐಟಿ ವರ್ಲ್ಡ್ ಪೀಸ್ ವಿವಿಯ ಅಧ್ಯಕ್ಷ ಡಾ.ವಿಶ್ವನಾತ ಕರಾಡ್‌ಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಸೆ.1ರಂದು ಮಧ್ಯಾರಾಧನೆ ನಿಮಿತ್ತ ಟಿಟಿಡಿಯಿಂದ ರಾಯರಿಗೆ ಸಮರ್ಪಣೆ ಮಾಡಲಾಗುತ್ತಿದ್ದು, ಸೆ.2ರಂದು ಉತ್ತರಾರಾಧನೆ ನಿಮಿತ್ತಿ ಮಹಾ ರಥೋತ್ಸವ ನಡೆಯಲಿದ್ದು, ಸಂಜೆ ಪ್ರಭಾತ್ ಕಲಾವಿದರಿಂದ ಪ್ರದರ್ಶನ ಜರುಗಲಿದೆ. ಸೆ.3ರಂದು ಸುಜ್ಞಾನೇಂದ್ರ ತೀರ್ಥರ ಆರಾಧನೆ ಹಾಗೂ ಸೆ.4ರಂದು ಸರ್ವ ಸಮರ್ಪಣೋತ್ಸವ ನಡೆಯಲಿದೆ.
ಈ ಸಂದರ್ಭದಲ್ಲಿ ತಲಾ 8 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ನರಹರಿ ತೀರ್ಥರ ವಸತಿ ಗೃಹ ಹಾಗೂ ಮೂಲರಾಮಾ ವಸತಿಗೃಹ, ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಜಗನ್ನಾಥ ದಾಸರ ಮ್ಯೂಸಿಮ್, 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಥೀಮ್ ಪಾರ್ಕ, ನವೀಕೃತಗೊಂಡ ವಿವಿಜಿ ವಸತಿ ಗೃಹಗಳನ್ನು ಉದ್ಘಾಟನೆ ನೆರವೇರಿಸಲಾಗುವುದು.
ಮಳೆಯಿಲ್ಲದ ಕಾರಣ ನದಿಯಲ್ಲಿ ನೀರಿನ ಕೊರತೆಯಿದ್ದು, ನದಿ ತಟದಲ್ಲಿ ಷವರ್ ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ ನದಿಗೆ ನೀರು ಹರಿಸುವಂತೆ ತುಂಗಭದ್ರಾ ಜಲಾಶಯದ ಅಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮಂತ್ರಾಲಯದಲ್ಲಿ ವಿಮಾನ ನಿಲ್ಧಾಣ ಆರಂಭಕ್ಕೆ ಸಂಬಂಸಿದಂತೆ ಏಜೆನ್ಸಿಯಿಂದ ಸರ್ವೇ ನಡೆಸಲಾಗಿದೆ ಎಂದು ಡಾ.ಸುಬುಧೇಂದ್ರ ತೀರ್ಥರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net