

ಚಾಮರಾಜನಗರ: ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ರವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಆ.29ರಂದು ಬೆಳಗ್ಗೆ 7 ಗಂಟೆಗೆ 5 ಕಿ.ಮೀ ರಸ್ತೆ ಓಟ (ಮ್ಯಾರಥಾನ್) ಮತ್ತು ಹಗ್ಗ-ಜಗ್ಗಾಟ ಸ್ಪರ್ಧೆಯನ್ನು ಪುರುಷ ಮತ್ತು ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಜನರು ಭಾಗವಹಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ 5 ಕಿ.ಮೀ ರಸ್ತೆ ಓಟ ಹಾಗೂ ಹಗ್ಗ-ಜಗ್ಗಾಟ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಡೆಯುವ 5 ಕಿ.ಮೀ ಮ್ಯಾರಥಾನ್ ಶ್ರೀಚಾಮರಾಜೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ಪಚ್ಚಪ್ಪ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ, ಡಿಸಿ ಕಚೇರಿ ಎಸ್.ಪಿ. ಕಚೇರಿ ಮುಂಭಾಗ, ರಾಮಸಮುದ್ರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ವಾಪಸ್ಸು ತಿರುಗಿ ಜೋಡಿ ರಸ್ತೆ ಮೂಲಕ ಅಂತಿಮವಾಗಿ ಚಾಮರಾಜೇಶ್ವರ ದೇವಸ್ಥಾನದಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.
ಸಾರ್ವಜನಿಕರು, ಕ್ರೀಡಾಪಟುಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೈಗಾರಿಕೊದ್ಯಮಿಗಳು, ಸಂಘ-ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ರಸ್ತೆ ಓಟ ಹಾಗೂ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಎಲ್ಲರೂ ಪಾಲ್ಗೊಳ್ಳಬಹುದಾಗಿದ್ದು, ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 3 ಸಾವಿರ, ದ್ವಿತೀಯ 2500, ತೃತೀಯ 2 ಸಾವಿರ, ನಾಲ್ಕನೇ ಸ್ಥಾನಕ್ಕೆ 1500, ಐದನೇ ಸ್ಥಾನಕ್ಕೆ 1 ಸಾವಿರ ಹಾಗೂ ಆರನೇ ಸ್ಥಾನಕ್ಕೆ 500 ರೂ. ಗಳ ನಗದು ಬಹುಮಾನ ನೀಡಲಾಗುವುದು ಎಂದು
ತಿಳಿಸಿದರು.
ವಿಶೇಷವಾಗಿ ಈ ಬಾರಿ ಹಗ್ಗ-ಜಗ್ಗಾಟ ಸ್ಪರ್ಧೆಯನ್ನು ನಡೆಸಲಾಗುತ್ತಿದ್ದು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 3 ಸಾವಿರ, ದ್ವಿತೀಯ ಬಹುಮಾನವಾಗಿ 2 ಸಾವಿರ ರೂ.ಗಳ ನಗದು ನೀಡಲಾಗುವುದು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ರಸ್ತೆ ಓಟ ಹಾಗೂ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಭಾಗವಹಿಸುವವರು ಆ.27ರೊಳಗೆ ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಚಿದಂಬರ, ಶಾಲಾ ಮತ್ತು ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಜಿಲ್ಲಾ ಕ್ರೀಡಾಂಗಣ ಅಭಿವೃದ್ದಿ ಸಮಿತಿ ಸದಸ್ಯ ವಿ.ಶ್ರೀನಿವಾಸ ಪ್ರಸಾದ್, ಮುಖಂಡರಾದ ಚಾ.ರಂ.ಶ್ರೀನಿವಾಸಗೌಡ, ಕ್ರೀಡಾ ತರಬೇತುದಾರ ಗಣೇಶ್ ಇತರರು ಹಾಜರಿದ್ದರು.