

ಮೈಸೂರು: ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸಹಯೋಗದಲ್ಲಿ ಹುಣಸೂರು ತಾಲೂಕಿನ ಕಲ್ಲಹಳ್ಳಿಯಿಂದ ಮಡಿಕೇರಿವರೆಗೆ ‘ಸಾಮರಸ್ಯಕ್ಕಾಗಿ ಸೌಹಾರ್ದ ನಡಿಗೆ’ ಕಾರ್ಯಕ್ರಮವನ್ನು ಆ.23ರಂದು ಆಯೋಜಿಸಲಾಗಿದೆ.
ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಆತಂಕಕಾರಿಯಾಗಿವೆ. ಧರ್ಮ-ಧರ್ಮ, ಜಾತಿ-ಜಾತಿಗಳ ನಡುವೆ ಕಂದಕ ಸೃಷ್ಟಿಸುವುದು, ಧರ್ಮಗಳ ನಡುವೆ ವೈಷಮ್ಯ ಬಿತ್ತುವ ಘಟನೆಗಳು ಜರುಗುತ್ತಿವೆ. ಆದ್ದರಿಂದ ಸೌಹಾರ್ದತೆಯಿಂದ ಕೂಡಿ ಬಾಳುವ, ಸೋದರತೆಯಿಂದ ಬದುಕುವ ವಾತಾವರಣ ನಿರ್ಮಿಸಬೇಕಾಗಿದೆ. ಅದಕ್ಕಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
23ರಂದು ಬೆಳಗ್ಗೆ 9ಕ್ಕೆ ಹುಣಸೂರಿನ ಕಲ್ಲಹಳ್ಳಿಯಿಂದ ಹೊರಟು ಪಿರಿಯಾಪಟ್ಟಣದಲ್ಲಿ ವಾಸ್ತವ್ಯ ಹೂಡಿ, 24ರಂದು ಕುಶಾಲನಗರ ತಲುಪಿ ಅಲ್ಲಿ ವಾಸ್ತವ್ಯ ಹೂಡಿ, 25ರಂದು ಮಡಿಕೇರಿ ತಲುಪಿ ಅಲ್ಲಿ ವಾಸ್ತವ್ಯ ಹೂಡಲಾಗುವುದು. ಸಮಾಜವಾದಿ ಚಿಂತಕರಾದ ಪ. ಮಲ್ಲೇಶ್, ಬಂಜಗೆರೆ ಜಯಪ್ರಕಾಶ್, ಪ್ರೊ.ಮಹೇಶ್‌ಚಂದ್ರಗುರು, ಪ್ರೊ.ಕೆ.ಎಸ್.ಭಗವಾನ್, ಶಾಸಕರಾದ ಎಚ್.ಪಿ. ಮಂಜುನಾಥ್, ಡಾ.ಯತೀಂದ್ರ ಸಿದ್ದರಾಮಯ್ಯ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.