

ಚನ್ನರಾಯಪಟ್ಟಣ: ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಚನ್ನರಾಯಪಟ್ಟಣದ ತೆಂಗು ಬೆಳೆಗಾರರು ಹಾಗೂ ರೈತರು ವಿಧಾನಸೌಧ ಚಲೋ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಆ.1ರಂದು ಪಟ್ಟಣದ ಆರ್‌ಎಂಸಿ ಆವರಣದಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಅರಳಾಪುರ ಮಂಜೇಗೌಡ ತಿಳಿಸಿದರು.
ತೆಂಗಿನ ಉತ್ಪನ್ನಗಳನ್ನೇ ಆದಾಯದ ಮೂಲವಾಗಿ ನಂಬಿದ್ದ ರೈತರು ಹಾಗೂ ತೆಂಗು ಬೆಳೆಗಾರರು ಬೆಲೆ ಇಳಿಕೆಯಿಂದ ಕಂಗಾಲಾಗಿದ್ದಾರೆ. ಹಿಂದೆ ಪ್ರತಿ ಕ್ವಿಂಟಲ್ ಕೊಬ್ಬರಿ 16 ಸಾವಿರದಿಂದ 18 ಸಾವಿರ ರೂ. ವರೆಗೂ ಮಾರಾಟವಾಗುತ್ತಿತ್ತು. ಕೇಂದ್ರ ಸರ್ಕಾರದ ತಪ್ಪು ಆಮದು ನೀತಿ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಸದ್ಯ ಪ್ರತಿ ಕ್ವಿಂಟಲ್ ಕೊಬ್ಬರಿಗೆ ಕೇವಲ 6 ಸಾವಿರದಿಂದ 7 ಸಾವಿರದವರೆಗೆ ಮಾರಾಟವಾಗುತ್ತಿದೆ. ಇದರಿಂದ ತೆಂಗು ಬೆಳೆಯುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರದಿಂದ 5 ಸಾವಿರ ಹಾಗೂ ಕೇಂದ್ರ ಸರ್ಕಾರದಿಂದ 15 ಸಾವಿರ ಸೇರಿ ಕೂಡಲೇ ಕೊಬ್ಬರಿಗೆ 20 ಸಾವಿರ ರೂ.ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ತಾಲೂಕಿನ ಎಲ್ಲ ತೆಂಗು ಬೆಳೆಗಾರರು ರೈತರು, ರಾಜಕೀಯ ಮುಖಂಡರು ಹಾಗೂ ಸಂಘಟನೆಗಳು ಪಕ್ಷಭೇದ ಮರೆತು ರೈತರ ಉಳಿವಿಗಾಗಿ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಸಲಹೆ-ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ರೈತ ಮುಖಂಡರಾದ ಪ್ರಕಾಶ್, ಪುಟ್ಟೇಗೌಡ, ತಮ್ಮಣ್ಣೇಗೌಡ, ಬಸವೇಗೌಡ, ಮೋಹನ್‌ಕುಮಾರ್ ಇತರರು ಇದ್ದರು.