

ಚಾಮರಾಜನಗರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆ.14 ರಂದು ರಸ್ತೆ ತಡೆ ಚಳುವಳಿಯನ್ನು ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ 4500 ರೂ, ನಿಗದಿ ಮಾಡಬೇಕು. ಇಳುವರಿಯಲ್ಲಿನ ಮೋಸ ತಪ್ಪಿಸಲು ವೈಜ್ಞಾನಿಕ ಸಮಿತಿ ರಚನೆ ಮಾಡಬೇಕು. ತೂಕದಲ್ಲಿನ ಮೋಸವನ್ನು ತಪ್ಪಿಸಲು ಕರ್ಖಾನೆಗಳ ಮುಂದೆ ತೂಕದ ಯಂತ್ರವನ್ನು ಅಳವಡಿಸಬೇಕು. ರಾಜ್ಯದಲ್ಲಿ ಅಗತ್ಯ ರಸಗೊಬ್ಬರ ಪೂರೈಕೆಗೆ ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ನೀತಿಯನ್ನು ಕೈಬಿಡಬೇಕು. ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿಮಾಡಬೇಕು. ವೈಜ್ಞಾನಿಕವಾಗಿ ಬೆಳೆ ನಷ್ಟ ಪರಿಹಾರವನ್ನು ನೀಡಲು ಕ್ರಮಕೈಗೊಳ್ಳಬೇಕು. ಕೆರೆಕಟ್ಟೆಗಳಿಗೆ ನದಿಮೂಲದಿಂದ ನೀರು ತುಂಬಿಸಬೇಕು. ಮಾನವ ಪ್ರಾಣೀ ಸಂಘರ್ಷವನ್ನು ತಡೆಗಟ್ಟಬೇಕು ಹಾಗೂ ಇನ್ನಿತರೆ ಹಕ್ಕೋತ್ತಾಯಗಳನ್ನು ಇಟ್ಟುಕೊಂಡು ಆ.12 ರಂದು ಜಿಲ್ಲಾ ಕೇಂದ್ರದಲ್ಲಿ ರಸ್ತೆತಡೆ ಚಳುವಳಿಯನ್ನು ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಮಲೆಯೂರು ಮಹೇಂದ್ರ, ಪ್ರಕಾಶ್ ಗಾಂಧಿ, ಗುರುವಿನಪುರ ಚಂದ್ರು, ಮುಕ್ಕಡಹಳ್ಳಿ ರಾಜು, ನರಸಮಂಗಲ ನಾಗಮಲ್ಲಪ್ಪ, ಗುರುಪುರ ಚಂದ್ರು ಹಾಜರಿದ್ದರು.