

ದೇವನಹಳ್ಳಿ: ನ್ಯಾಯಾಲಯದಲ್ಲಿ ವಿವಿಧ ದಾವೆ ಪ್ರಕರಣ ಹೆಚ್ಚಾಗಿದ್ದು, ಗಂಭೀರ ಪ್ರಕರಣ ಹೊರತುಪಡಿಸಿ ರಾಜಿ ಸಂಧಾನದಂತಹ ಪ್ರಕರಣ ಇತ್ಯರ್ಥ ಪಡಿಸಲು ದೇವನಹಳ್ಳಿ ನ್ಯಾಯಾಲಯದಲ್ಲಿ ಆ.13ರಂದು ಲೋಕ ಅದಾಲತ್ ಏರ್ಪಡಿಸಲಾಗಿದೆ ಎಂದು 5ನೇ ಅಪರ ಜಿಲ್ಲಾ ನ್ಯಾಯಾಧೀಶ ಬಿರಾದಾರ್ ದೇವೇಂದ್ರಪ್ಪ ತಿಳಿಸಿದರು.
ಪಟ್ಟಣದ ನ್ಯಾಯಾಲಯದ ವಕೀಲರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜನಸಂಖ್ಯೆ ಹೆಚ್ಚಾದಂತೆ ನ್ಯಾಯಾಲಯಗಳಲ್ಲಿ ವಿವಿಧ ರೀತಿಯ ಪ್ರಕರಣ ಹೆಚ್ಚಾಗುತ್ತಿದ್ದು, ಸಮಾಜಘಾತುಕ ಪ್ರಕರಣ ಹೊರತುಪಡಿಸಿ ಉಳಿದ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಲೋಕ ಅದಾಲತ್ ನಡೆಸಲಾಗುತ್ತಿದೆ ಎಂದರು.
ಇದುವರೆವಿಗೂ ಆಯೋಜಿಸಿದ್ದ ಲೋಕ ಅದಾಲತ್‌ಗಳಲ್ಲಿ ಸಾವಿರಾರು ಪ್ರಕರಣ ಇತ್ಯರ್ಥಗೊಂಡಿವೆ. ಒಮ್ಮೆ ರಾಜಿ ಸಂಧಾನವಾದ ಪ್ರಕರಣಗಳು ಮತ್ತೆ ಅಪೀಲು ಹೋಗಲು ಅವಕಾಶವಿರುವುದಿಲ್ಲ. ಅದಾಲತ್ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಯಸುವವರು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳನ್ನು ವಕೀಲರ ಮೂಲಕ ಭೇಟಿ ಮಾಡಬಹುದು ಎಂದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ, ಕಾನೂನೂ ಸೇವಾ ಸಮಿತಿ ಅಧ್ಯಕ್ಷ ಡಿ.ಕೆ. ಮಧುಸೂದನ್ ಮಾತನಾಡಿ, ಲೋಕ ಅದಾಲತ್ ಮೂಲಕ ಪ್ರಕರಣಗಳ ಇತ್ಯರ್ಥಪಡಿಸಿ ದಾವೆಗಳ ಸಂಖ್ಯೆ ಕಡಿಮೆ ಮಾಡುವ ಪ್ರಯತ್ನವಾಗಿದೆ. ಯಾವುದೇ ಒತ್ತಾಯ ಇರುವುದಿಲ್ಲ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಪಾಟೀಲ ರಂಗನಗೌಡ, 2ನೇ ಅಪರ ಸಿವಿಲ್ ನ್ಯಾಯಾಧೀಶ ರಾಜಶೇಖರ್, ಪ್ರಧಾನ ಸಿವಿಲ್ ಜೆಎಂಎಫ್‌ಸಿ ನ್ಯಾಯಾಧೀಶರಾದ ಪ್ರತಾಪ್ ಕುಮಾರ್, ಸುಕನ್ಯಾ, ಉಪಾಧ್ಯಕ್ಷ ಜಯರಾಮ್, ಪ್ರಧಾನ ಕಾರ್ಯದರ್ಶಿ ಎಚ್.ಸಿ.ಆನಂದ್, ಮಾಜಿ ಅಧ್ಯಕ್ಷ ಬಿ.ಎಂ.ಬೈರೇಗೌಡ ಇದ್ದರು