ಆ.13 ರಿಂದ ರೈತ ಸಂಘದಿಂದ ಹೋರಾಟ

badagalapura nagendra
Published on

ಚಾಮರಾಜನಗರ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ.13 ರಿಂದ ದೇಶಾದ್ಯಂತ ಹೋರಾಟ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ದೇಶದಲ್ಲಿ ಶೇ.60 ರಷ್ಟು ರೈತರಿದ್ದು, ಕೃಷಿಯಿಂದ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿದೆ. ಆದರೆ ಡಬ್ಲ್ಯುಟಿಒ ಜಾರಿಗೆ ಬಂದ ನಂತರ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಭೂಮಿ ಕಾರ್ಪೋರೇಟ್ ಕಂಪನಿಗಳ ವಶವಾಗುತ್ತಿದೆ. ಈ ನಿಟ್ಟಿನಲ್ಲಿ ಸಂಯುಕ್ತ ಕಿಸಾನ್ ಸಂಘದ ಕರೆ ಮೇರೆಗೆ 11 ಬೇಡಿಕೆಗಳನ್ನು ಇಟ್ಟುಕೊಂಡು ಆ.13 ರಿಂದ ನ.26 ರವರೆಗೆ ಹೋರಾಟ ನಡೆಸಲಾಗುವುದು. ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಅಮೇರಿಕಾ ಹಾಗೂ ಬ್ರಿಟನೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಕರಡು ಪ್ರತಿಯ ಪ್ರತಿಕೃತಿಯನ್ನು ದಹನ ಮಾಡಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಮೇರಿಕಾ ಭಾರತ ಒಪ್ಪಂದವನ್ನು ರದ್ದುಪಡಿಸಬೇಕು. ಭಾರತ ಬ್ರಿಟಿನ್ ತೆ ಒಪ್ಪಂದ ಮಾಡಿಕೊಂಡಿದ್ದು, ಕೂಡಲೇ ಸ್ಥಗಿತಗೊಳಿಸಿ ಸಾರ್ವಜನಿಕರ ಚರ್ಚೆಗೆ ಬಿಡಬೇಕು. ಎಂಎನ್‌ಸಿ ಕಂಪನಿಗಳು ದೇಶ ಬಿಟ್ಟು ಹಾಗೂ ಕಾರ್ಪೋರೇಟ್ ಕಂಪನಿಗಳು ಕೃಷಿ ಬಿಟ್ಟು ತೊಲಗಬೇಕು. ರಾಜ್ಯ ಸರ್ಕಾರ ಸೋಮವಾರದಿಂದ ನಡೆಯುವ ಅಧಿವೇಶನದಲ್ಲಿ ಜಾನುವಾರು ಹತ್ಯೆ ನಿಷೇಧ ಕಾಯ್ದೆ, ಭೂಸುಧಾರಣೆ ಕಾಯ್ದೆಯನ್ನು ವಾಪಸ್ಸು ಪಡೆಯಬೇಕು. ಹೊಸ ಕೃಷಿ ಮಾರುಕಟ್ಟೆ ನೀತಿಯನ್ನು ತಿರಸ್ಕರಿಸಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷ ಮಹೇಶ್‌ಪ್ರಭು, ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, ಪದಾಧಿಕಾರಿ ಮಹೇಶ್ ಕುಮಾರ್, ಹೆಬ್ಬಸೂರು ಬಸವಣ್ಣ, ಬಸವರಾಜು, ಭಾಸ್ಕರ್, ಗೌಡೇಗೌಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net