

ಗುರುಗುಂಟಾ: ನಾರಾಯಣಪುರ ಜಲಾಶಯದ ಬಲದಂಡೆ ಹಾಗೂ ರಾಂಪುರ ಏತ ನೀರಾವರಿ ನಾಲೆಗಳಿಗೆ ವಾರಬಂದಿ ಆಧಾರದಲ್ಲಿ ಏ.20ರ ತನಕ ನೀರು ಹರಿಸಬೇಕೆಂದು ಒತ್ತಾಯಿಸಿ ರೈತ ಸಂಘ ಹಸಿರು ಸೇನೆ ತಾಲೂಕು ಘಟಕ ನೇತೃತ್ವದಲ್ಲಿ ನೂರಾರು ರೈತರು ಬುಧವಾರ ರಾಷ್ಟ್ರೀಯ ಹೆದ್ದಾರಿ-150 ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಸಂಘದ ತಾಲೂಕು ಅಧ್ಯಕ್ಷ ದುರ್ಗಾಪ್ರಸಾದ್ ಮಾತನಾಡಿ, ಅಹೋರಾತ್ರಿ ಧರಣಿ, ಟ್ರ್ಯಾಕ್ಟರ್ ರ‌್ಯಾಲಿಯಂತಹ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಕ್ಯಾರೆ ಅನ್ನದ ಸರ್ಕಾರದ ಧೋರಣೆ ಖಂಡನೀಯ. ವಿಷ ಕೊಡಿ ಅಥವಾ ನೀರು ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಸಲಹಾ ಸಮಿತಿಯ ಅವೈಜ್ಞಾನಿಕ ನಿರ್ಧಾರದಿಂದ ಈ ಭಾಗದ ರೈತರು ನೀರಿಗಾಗಿ ಹೋರಾಟ ಮಾಡುವಂತಾಗಿದೆ. ಸರ್ಕಾರದ ಕೈಗೊಂಬೆಯಾದ ಅಧಿಕಾರಿಗಳಿಂದ ಏಪ್ರಿಲ್ ಮಾಸಾಂತ್ಯತನಕ ನಮಗೆ ದಕ್ಕಬೇಕಾದ ನೀರು ಬೇರೆ ರಾಜ್ಯಕ್ಕೆ ಹರಿಬಿಟ್ಟಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದರು.
ಸ್ಥಳಕ್ಕೆ ಆಗಮಿಸಿದ ನಾರಾಯಣಪುರ ಬಲದಂಡೆ ನಾಲೆಯ ನೀರಾವರಿ ಇಲಾಖೆ ಅಧಿಕಾರಿ ರಮೇಶ್ ರಾಠೋಡ್ ಮನವಿ ಸ್ವೀಕರಿಸಿ,
ಈ ಹಿಂದೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಿದಂತೆ ಮುಂಗಾರು ಬೆಳೆಗಳಿಗೆ 120 ದಿನ ನಾಲೆಗೆ ನೀರು ಬಿಟ್ಟಿದ್ದೇವೆ. ಮಾ.23ರ ತನಕ ನಮ್ಮಲ್ಲಿ 2 ಟಿಎಂಸಿ ನೀರಿನ ಲಭ್ಯತೆ ಇದೆ. ರೈತರ ಮನವಿ ಹಿನ್ನೆಲೆಯಲ್ಲಿ ಮತ್ತೊಂದು ಸಲ ಐಸಿಸಿ ಸಭೆ ಕರೆದು ಈ ವಿಷಯ ಚರ್ಚಿಸಲಾಗುವುದು ಎಂದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ್, ಹಿಂದು ಜಾಗರಣ ವೇದಿಕೆಯ ಹನುಮಂತ ಅಂಬಿಗೇರ್, ಶಿವು, ರಮೇಶ ಗೌಡೂರು ಮಾತನಾಡಿದರು. ಲಿಂಗಸುಗೂರು ವಕೀಲರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಪಟ್ಟಣಶೆಟ್ಟಿ, ರೈತ ಸಂಘದ ಸಿಂಧನೂರು ತಾಲೂಕು ಅಧ್ಯಕ್ಷ ನಿರುಪಾದೆಪ್ಪ, ಪ್ರಮುಖರಾದ ಬಸವರಾಜ ಅಂಗಡಿ, ಹನುಮನಗೌಡ ರಾಮಣ್ಣ, ಲಾಲ್ ಸಾಬ್, ಬಸಣ್ಣ ಕೊಠಾರಿ, ಅಮರೇಶ ಗುತ್ತೇದಾರ್, ಮಹಾಂತೇಶ ಬಿಜ್ಜಲ್, ತಿಪ್ಪಣ್ಣ ಹವಾಲ್ದಾರ್, ಶಿವು ಅಡಿಕೇರಿ ಅಮರಪ್ಪ, ಬಾಷಾಸಾಬ್ ಇತರರಿದ್ದರು.