

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಲ ಮಂಡಳಿ ಗುತ್ತಿಗೆ ಕಾರ್ಮಿಕರ ವೇತನ ಬಿಡುಗಡೆ ಹಾಗೂ ಕರ್ನಾಟಕ ವಿಶ್ವ ವಿದ್ಯಾಲಯದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸದ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ನೇತೃತ್ವದಲ್ಲಿ ಸೋಮವಾರದಿಂದ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.
ನೀರು ಪೂರೈಕೆ ಹಾಗೂ ನಿರ್ವಹಣೆ ಜವಾಬ್ದಾರಿ ಹೊತ್ತ ಎಲ್ ಆ್ಯಂಡ್ ಟಿ ಕಂಪನಿ ಸುಮಾರು 650 ನೌಕರರಿಗೆ ವೇತನ ವಿತರಿಸಿಲ್ಲ. ಸರಿಯಾಗಿ ನೀರು ಪೂರೈಕೆ ಮಾಡದೆ ಜನರು ಪರದಾಡುವಂತಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜನರಿಗೆ ಹಾಗೂ ನೌಕರರಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ ವಿಶ್ವ ವಿದ್ಯಾಲಯದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ಲ್ಯಾಪ್‌ಟಾಪ್ ವಿತರಿಸುವಂತೆ ಹಲವು ಬಾರಿ ಹೋರಾಟ ನಡೆಸಿದ್ದರೂ ಕ್ರಮವಾಗಿಲ್ಲ. ಪ್ರತಿಭಟನೆ ನಡೆಸಿದಾಗಲೆಲ್ಲ ಬರೀ ಆಶ್ವಾಸನೆ ನಡೆಸುತ್ತಲೇ ಕಾಲ ಹರಣ ಮಾಡಿದ್ದಾರೆ. ಸರ್ಕಾರ ಬರೀ ಆಶ್ವಾಸನೆಗೆ ಮೀಸಲಾಗಿದ್ದು, ಸಮಸ್ಯೆಗಳ ಪರಿಹಾರಕ್ಕೆ ಆಸಕ್ತಿ ವಹಿಸುತ್ತಲೇ ಇಲ್ಲ ಎಂದು ದೂರಿದರು.
ರಾತ್ರಿ ಕಾಂಗ್ರೆಸ್ ನಾಯಕರು, ಮಹಿಳಾ ಮುಖಂಡರು ಸಹ ಭಾಗವಹಿಸಿ ಬೆಂಲ ಸೂಚಿಸಿದರು. ಸರ್ಕಾರದಲ್ಲಿ ಕ್ರಮಕೈಗೊಂಡು ನ್ಯಾಯ ಕೊಡಿಸದೇ ಇದ್ದಲ್ಲಿ ಇನ್ನಷ್ಟು ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ವಸಂತ ಅರ್ಕಾಚಾರ, ಸ್ವಾತಿ ಮಾಳಗಿ, ಸತೀಶ ತುರಮರಿ, ಆನಂದ ಸಿಂಗನಾಥ, ತಾನಾಜಿ ಪುಂಡೆ, ಜಲ ಮಂಡಳಿ ನೌಕರರು, ಇತರರು ಇದ್ದರು.