ಅಹೋರಾತ್ರಿ ಅಬಕಾರಿ ಅಧಿಕಾರಿಗಳ ವಾಹನ ಅಡ್ಡಗಟ್ಟಿದ ಜನತೆ

Illicit Liquor, Bangaragunda, Kapanur, Protest, Nalatwad, Excise Officers,
ನಾಲತವಾಡ ಸಮೀಪದ ಬಂಗಾರಗುಂಡ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ 6 ಗಂಟೆಗೆ ಅಬಕಾರಿ ಅಧಿಕಾರಿಗಳ ವಾಹನ ತಡೆದು ಅವಳಿ ಗ್ರಾಮಗಳ ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡರು.
Published on

ನಾಲತವಾಡ: ಸಮೀಪದ ಬಂಗಾರಗುಂಡ, ಕಪನೂರ ಅವಳಿ ಗ್ರಾಮಕ್ಕೆ ಶನಿವಾರ ರಾತ್ರಿ ಆಗಮಿಸಿದ್ದ ಅಬಕಾರಿ ಅಧಿಕಾರಿಗಳನ್ನು ಕೂಡಿ ಹಾಕಿದ ಗ್ರಾಮಸ್ಥರು ಅಕ್ರಮ ಮದ್ಯ ಮಾರಾಟಕ್ಕೆ ಕುಮ್ಮಕ್ಕು ನೀಡುತ್ತಿರುವುದನ್ನು ಖಂಡಿಸಿ ಛೀಮಾರಿ ಹಾಕಿದರು. ಇಡೀ ರಾತ್ರಿ ಗ್ರಾಮ ಬಿಟ್ಟು ಹೋಗದಂತೆ ಮಹಿಳೆಯರು ಅಡ್ಡಗಟ್ಟಿ ವಾಹನಗಳ ಮುಂದೆ ಮಲಗಿ ಪ್ರತಿಭಟಿಸಿದರು.

ಬಂಗಾರಗುಂಡ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದಲೂ ಗ್ರಾಮದಲ್ಲಿ ಅಂದಾಜು 12 ಕಡೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ, ಮಾರಾಟದಿಂದ ಕುಟುಂಬಗಳ ನೆಮ್ಮದಿ ಅಲ್ಲದೆ ಮದ್ಯ ವ್ಯಸನಿಗಳಿಂದ ಗ್ರಾಮದಲ್ಲಿ ಹಗಲಿರುಳು ಮಹಿಳೆಯರು, ಯುವತಿಯರು ವೃದ್ಧರು ಅಲೆದಾಡಲೂ ಭಯ ಉಂಟಾಗಿದೆ. ಹಲವಾರು ಬಾರಿ ತಹಸೀಲ್ದಾರ್, ಅಬಕಾರಿ ಅಧಿಕಾರಿಗಳು ಹಾಗೂ ಪಕ್ಕದ ಗ್ರಾಪಂ ಅಧಿಕಾರಿಗಳಿಗೂ ಹೇಳಿದರೂ ಅಕ್ರಮ ಮಾರಾಟ ನಿಲ್ಲುತ್ತಿಲ್ಲ ಎಂದು ಅಕ್ರೋಶ ಹೊರ ಹಾಕಿದ ಗ್ರಾಮದ ಮಹಿಳೆಯರು ಅಬಕಾರಿ ಇಲಾಖೆಯವರಿಗೆ ಬೆವರಿಳಿಸಿದರು.

ಯುವಕರ ಬಲಿ: ಬಂಗಾರಗುಂಡ ಗ್ರಾಮದಲ್ಲಿ ಅಕ್ರಮ ಮದ್ಯ ಎಲ್ಲೆಂದರಲ್ಲಿ ಮಾರಾಟ ಮಾಡುತ್ತಿರುವ ಪರಿಣಾಮ ಹಲವು ಯುವಕರು ಮದ್ಯದ ಚಟಕ್ಕೊಳಗಾಗಿ ಈವರೆಗೆ 20ಕ್ಕೂ ಹೆಚ್ಚು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಚಟಕ್ಕೆ ಹಣವಿಲ್ಲದೆ ಹೆತ್ತವರೊಂದಿಗೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು.
ಶಾಲೆಯೊಳಗೆ ಗುಂಡು ಪಾರ್ಟಿ: ಬಂಗಾರಗುಂಡ ಗ್ರಾಮದ ಸರ್ಕಾರಿ ಶಾಲೆಯ ಕಾಂಪೌಂಡ್‌ನಲ್ಲಿ ಬಿಂದಾಸ್ ಗುಂಡು ಪಾಟಿ ನಡೆಯುತ್ತಿದ್ದು, ಕುಡುಕರು ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಎಸೆದು ಮಕ್ಕಳು, ಶಿಕ್ಷಕರು ಶಾಲೆಗೆ ಬರದಂಥ ವಾತಾವರಣ ನಿರ್ಮಿಸಿದ್ದಾರೆ ಎಂದು ಆವರಣದೊಳಗೆ ಬಿದ್ದ ಅಪಾರ ಮದ್ಯದ ಬಾಟಲಿಗಳನ್ನು ಭಾನುವಾರ ಬೆಳಗಿನ ಜಾವ 7 ಗಂಟೆ ವೇಳೆ ಗ್ರಾಮಸ್ಥರು ಪ್ರದರ್ಶಿಸಿದರು.
ಅಧಿಕಾರಿಗಳ ಅನುಚಿತ ವರ್ತನೆ: ಬಂಗಾರಗುಂಡ, ಕಪನೂರ ಗ್ರಾಮದಲ್ಲಿ ಇಷ್ಟೆಲ್ಲ ಮದ್ಯ ಮಾರಾಟ ಹಾಗೂ ಕುಡುಕರಿಂದ ನೆಮ್ಮದಿ ಹಾಳಾಗಿದೆ ಎಂದು ಗಮನಕ್ಕೆ ತಂದರೂ ಅಬಕಾರಿ ಅಧಿಕಾರಿಗಳು ಶನಿವಾರ ರಾತ್ರಿ ಬಂಗಾರಗುಂಡ ನಡೆದ ಪ್ರತಿಭಟನೆ ವೇಳೆ ಯಾರು ಮಾರಾಟ ಮಾಡುತ್ತಾರೋ ಸಾಕ್ಷಿ ಸಮೇತ ಸಾಕಷ್ಟು ಬಾಟಲಿಗಳನ್ನು ತೋರಿಸಿ ನೋಡೋಣ ಎಂದು ಮಹಿಳೆಯರಿಗೆ ಸವಾಲ್ ಹಾಕಿ ತಮ್ಮ ದರ್ಪ ತೋರಿದ್ದಾರೆ ಎಂದು ಅವಳಿ ಗ್ರಾಮಗಳ ಗ್ರಾಮಸ್ಥರು ಆರೋಪಿಸಿದರು.
ಉಪವಾಸ ಸತ್ಯಾಗ್ರಹ: ಇನ್ನೆರಡು ದಿನಗಳಲ್ಲಿ ಗ್ರಾಮಗಳಿಗೆ ಮೇಲಧಿಕಾರಿಗಳು, ತಹಸೀಲ್ದಾರ್ ಹಾಗೂ ಜಿಲ್ಲಾ ಅಬಕಾರಿ ಅಧಿಕಾರಿಗಳು ಆಗಮಿಸಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದೆ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಸಾಕ್ಷಿ ಸಮೇತ ಹಾಗೂ ಮುದ್ದೇಬಿಹಾಳ ಅಬಕಾರಿ ಅಧಿಕಾರಿಗಳ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡುವುದು ಖಚಿತ ಎಂದು ಅವಳಿ ಗ್ರಾಮಗಳ ಗ್ರಾಮಸ್ಥರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಬಸಲಿಂಗಮ್ಮ ಬೆಲವಂತರಕಂಟಿ, ನಾಗಮ್ಮ ನಾಡಗೌಡ, ದ್ಯಾಮವ್ವ ವಾಲಿಕಾರ, ಸಂಗಮ್ಮ ಹಿರೇಮಠ, ಧರ್ಮವ್ವ ಸ್ಥಾವರಮಠ, ಬಸಮ್ಮ ಬೈಲಕೂರ, ಈರಮ್ಮ ಹಿರೇಮಠ, ರುದ್ರಮ್ಮ ಹಿರೇಮಠ, ಬಸಲಿಂಗಯ್ಯ ಬೆಲವಂತರಕಂಠಿಮಠ, ಈರಣ್ಣ ಗೌಡರ, ಆಂಜನೇಯ ಬಿರಾದಾರ, ಸಿದ್ದಯ್ಯ ಸರಗಣಾಚಾರಿ, ಹನುಮಂತ ಗೌಡರ, ಬಸಯ್ಯ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net