ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬೇಡಿ : ಮುಖಂಡರಲ್ಲಿ ಇನ್ಸ್‌ಪೆಕ್ಟರ್ ಬಸವರಾಜು ಮನವಿ

28HDK01
Published on


ಮೈಸೂರು : ಕಳೆದ ಎರಡು ವರ್ಷದಿಂದ ಗೌರಿ, ಗಣೇಶ ಹಬ್ಬವನ್ನು ಜನರು ಅದ್ದೂರಿಯಾಗಿ ಆಚರಣೆ ಮಾಡಿರಲಿಲ್ಲ. ಆದರೆ ಈ ವರ್ಷ ಎಲ್ಲೆಡೆ ಸಂಭ್ರಮ-ಸಡಗರದಿಂದ ಆಚರಣೆ ಮಾಡುವುದರಿಂದ ಯಾರೂ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬೇಡಿ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಬಸವರಾಜು ಮನವಿ ಮಾಡಿದರು.


ಗೌರಿ, ಗಣೇಶ ಹಬ್ಬದ ಪ್ರಯುಕ್ತ ಎಚ್.ಡಿ.ಕೋಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಆಯೋಜಿಸಿದ್ದ ಸರ್ವಧರ್ಮ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಆಚರಣೆ ವೇಳೆ ಯಾರ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ನಡೆದುಕೊಳ್ಳಬೇಕು. ವೈಯಕ್ತಿಕ ವಿಚಾರಗಳನ್ನು ಬದಿಗೊತ್ತಿ ಅವರವರ ಭಾವನೆಗಳಿಗೆ ಗೌರವ ಕೊಡುವಂತ ಕೆಲಸವನ್ನು ಎಲ್ಲರೂ ಮಾಡಬೇಕು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಕೋರಿದರು.


ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಯಾವ ಸ್ಥಳದಲ್ಲಿ ಗಣೇಶ ಮೂರ್ತಿಯನ್ನು ಪೂಜಿಸಲಾಗುತ್ತದೆ ಎಂಬುದನ್ನು ಮೊದಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಜತೆಗೆ ಸರ್ಕಾರಿ ಜಾಗ ಅಥವಾ ಖಾಸಗಿ ಸ್ಥಳದಲ್ಲಿ ಪೂಜಿಸುವವರು ಅನುಮತಿ ಪತ್ರ ಪಡೆದು ಅದನ್ನು ನಮಗೆ ಸಲ್ಲಿಸಬೇಕು ಎಂದರು.


ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ಯಾರಾದರೂ ಒಬ್ಬರು ಇರಬೇಕು. ಜತೆಗೆ ವಿಸರ್ಜನೆ ಮಾಡುವಾಗ ನುರಿತ ಈಜುಗಾರರ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡು ಗಣೇಶಮೂರ್ತಿ ವಿಸರ್ಜನೆ ಮಾಡಬೇಕು. ಮೆರವಣಿಗೆ ಸಂದರ್ಭದಲ್ಲಿ ಡಿಜೆ ಸೌಂಡ್ ಬಳಸುವಂತ್ತಿಲ್ಲ. ನಿಗದಿ ಮಾರ್ಗದಲ್ಲಿ ಮೆರವಣಿಗೆ ಮಾಡಬೇಕು ಎಂದು ಸೂಚಿಸಿದರು.


ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಸೌಂಡ್ ಸಿಸ್ಟಂ ಬಳಸಲು ಮಾತ್ರ ಅವಕಾಶ ಇದ್ದು, ನಂತರ ಬಳಕೆ ಮಾಡಿದಲ್ಲಿ ಅಂತಹವರ ಮೇಲೆ ಕ್ರಮ ವಹಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಪುರಸಭಾ ಸದಸ್ಯ ಆಸಿಫ್ ಇಕ್ಬಾಲ್ ಮಾತನಾಡಿ, ಪಟ್ಟಣದಲ್ಲಿ ಹಿಂದು, ಮುಸ್ಲಿಂ ಸಮುದಾಯ ಅನಾದಿ ಕಾಲದಿಂದಲೂ ಸೌಹಾರ್ದಯುತವಾಗಿ ನಡೆದುಕೊಂಡು ಬಂದಿದ್ದು, ನಮ್ಮಲ್ಲಿ ಯಾವುದೇ ಭೇದಭಾವ ಇಲ್ಲ. ಇದುವರೆಗೆ ಯಾವುದೇ ಅಹಿತಕರ ಘಟನೆ ಪಟ್ಟಣದಲ್ಲಿ ನಡೆದಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲೂ ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದೆ ಸೌಹಾರ್ದಯುತವಾಗಿ ನಡೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.


ಸಭೆಯಲ್ಲಿ ಎಸ್‌ಐ ರಸುಲಾ ಪಾಗವಾಲೆ, ಪಟ್ಟಣದ ವರ್ತಕರ ಸಂಘದ ಅಧ್ಯಕ್ಷ ವಿನಯ್ ಭಜರಂಗಿ, ಟೈಲರ್ ರಾಜು, ಪುಟ್ಟಣ್ಣ, ವೇಣುಗೋಪಾಲ, ಚಾ.ಶಿವಕುಮಾರ್, ಸಣ್ಣಕುಮಾರ್, ಸಯ್ಯದ್ ಅಬೀಬ್, ನಯಾಜ್ ಖಾನ್, ತನ್ನು, ಜಿ.ಎಂ.ದಸ್ತಗೀರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net