ಅಹಿಂದಕ್ಕೆ ರಾಜ್ಯ ಸರ್ಕಾರ ಅನ್ಯಾಯ

1907KLb06
Published on

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವೂ ದೇಶದಲ್ಲಿನ ನಾಲ್ಕು ಜಾತಿಗಳಾದ ಬಡವರು, ರೈತರು, ಯುವಕರು, ಮಹಿಳೆಯರಿಗೆ ಶಕ್ತಿ ತುಂಬುತ್ತಿದೆ. ಆದರೆ ಕಾಂಗ್ರೆಸ್​ ಸರ್ಕಾರ ಜನರನ್ನು ಜಾತಿ, ಧರ್ಮದ ಹೆಸರಲ್ಲಿ ಜನರನ್ನು ಒಡೆದಾಳಿ, ಪ್ರಗತಿ ಮರೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆ, ವಿಭಾಗ ಪ್ರಮುಖರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಅನುಭವಿ ಎಂದುಕೊಳ್ಳುವ ಆರ್ಥಿಕ ಸಚಿವರೇ ಸಿಎಂ ಇದ್ದರೂ ಸಹ ಆರ್ಥಿಕ ಸ್ಥಿತಿ ಕುಸಿದಿದೆ. ಅಹಿಂದ ನೇತಾರ ಎನ್ನುತ್ತ ಇಡೀ ಅಹಿಂದ ವರ್ಗಕ್ಕೆ ಅನ್ಯಾಯ ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಹಾಲು, ಅಫಿಡವಿಟ್​ ಬೆಲೆ, ವಾಹನ ನೋಂದಣಿ, ಆಸ್ಪತ್ರೆ ಶುಲ್ಕ, ರೈತರಿಗೆ ವಿದ್ಯುತ್​ ಪರಿವರ್ತಕ (ಟಿಸಿ)ದರ ಸೇರಿ ಸರಣಿ ದರ ಏರಿಕೆ ಮಾಡಿ, ಬಡವರ ಮೇಲೆ ಹೊರೆ ಹಾಕಿದ್ದಾರೆ ಸಿದ್ದರಾಮಯ್ಯ. ಇದೀಗ ಬೀದಿ ಬದಿ ವ್ಯಾಪಾರಿಗಳಿಗೆ ನೋಟಿಸ್​ ನೀಡಿ, ಹಣ ವಸೂಲಿ ಮಾಡುತ್ತಿದ್ದಾರೆ. ಇದೆಲ್ಲವನ್ನು ಜನರಿಗೆ ತಿಳಿಸಲು ಪ್ರತಿಯೊಬ್ಬರೂ ಮೋದಿ ಅವರ ರಾಯಭಾರಿ ಆಗಿ, ಜನಮಾನಸಕ್ಕೆ ತಲುಪಿಸಬೇಕಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ, ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, 2047ರ ವಿಕಸಿತ ಭಾರತ ಗುರಿ ಜತೆಗೆ ಸಾಗಿದ್ದು, 140 ಕೋಟಿ ಜನ ಕೈ ಜೋಡಿಸಬೇಕಿದೆ. ಸೇವೆ, ಸುಶಾಸನ, ಬಡವರ ಕಲ್ಯಾಣದಂತೆ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ರಾಷ್ಟ್ರ ಮೊದಲು ಚಿಂತನೆ ಸಾಕಾರಗೊಳಿಸಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸಂಘಟನೆಗೆ ಬಲ ತುಂಬಬೇಕಿದೆ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್​, ಕಾರ್ಯದರ್ಶಿ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್​, ಬೀದರ್​ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್​, ಯಾದಗಿರಿ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಮಾಜಿ ಸಂಸದ ಡಾ.ಉಮೇಶ ಜಾಧವ್​, ಶಾಸಕರಾದ ಅವಿನಾಶ ಜಾಧವ್​, ಬಿ.ಜಿ.ಪಾಟೀಲ್​, ಸಿದ್ದು ಪಾಟೀಲ್​, ಎಂ.ಜಿ.ಮುಳೆ, ಮಾಜಿ ಶಾಸಕರಾದ ರಾಜಕುಮಾರ್​ ಪಾಟೀಲ್​ ತೇಲ್ಕೂರ, ದತ್ತಾತ್ರೇಯ ಪಾಟೀಲ್​, ಸುಭಾಷ ಗುತ್ತೇದಾರ್​, ಅಮರನಾಥ ಪಾಟೀಲ್​, ಪ್ರಮುಖರಾದ ಬಾಬುರಾವ ಚವ್ಹಾಣ್​, ಗುಂಡಪ್ಪ ವಕೀಲ, ಪ್ರಕಾಶ ಖಂಡ್ರೆ, ನಿತಿನ್​ ಗುತ್ತೆದಾರ್​, ಅವ್ವಣ್ಣ ಮ್ಯಾಕೇರಿ, ಶ್ರೀನಿವಾಸ ದೇಸಾಯಿ, ಸಂತೋಷ ಹಾದಿಮನಿ, ನಾಗರಾಜ ಮಹಾಗಾಂವಕರ್​, ಬಾಬುರಾವ ಹಾಗರಗುಂಡಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net