ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅನೇಕರು ಕಟ್ಟಿರುವ ಅಹಿಂದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಸ್‌ಪಿಕೆ ಆರ್.ಉಮೇಶ್ ಸಲಹೆ ನೀಡಿದರು.
ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ತಾಲೂಕು ಕುರುಬರ ಸಂಘದ ಸಂಕೀರ್ಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಅಹಿಂದ ಸಂಘಟನೆಯ ಅಪೇಕ್ಷಿತ ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಪ್ರಭುಲಿಂಗ ಎಲ್.ದೊಡ್ಡಣಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಹಿಂದ ಸಂಘಟನೆಯಲ್ಲಿ ಕುರುಬರ ಸಮುದಾಯ ಮಾತ್ರವಲ್ಲದೆ, ಎಲ್ಲ ಸಮುದಾಯದ ಮುಖಂಡರನ್ನು ಸೇರಿಸಿಕೊಳ್ಳಬೇಕು. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಸ್ಥಾನಮಾನ ಹಂಚಿಕೆ ಮಾಡಬೇಕು. ಸಂಘಟನೆಯನ್ನು ಜಿಲ್ಲೆಯಲ್ಲಿ ಬಲಿಷ್ಠಗೊಳಿಸಿ ರಾಜ್ಯದಲ್ಲಿ ಮಾದರಿ ಸಂಘಟನೆ ಮಾಡುವಂತೆ ಸಲಹೆ ನೀಡಿದರು.
ಅಹಿಂದ ಸಂಘಟನೆ ಜಿಲ್ಲಾಧ್ಯಕ್ಷ ಎಂ.ಮಹೇಶ್ ಹಳೇಪುರ ಮಾತನಾಡಿ, ಈಗಾಗಲೇ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರ ಆಯ್ಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಸಮಿತಿಯನ್ನು ಉದ್ಘಾಟನೆ ಮಾಡಲಾಗುತ್ತದೆ ಎಂದರು. ಸಭೆಯಲ್ಲಿ ಮುಖಂಡರಾದ ಸೈಯದ್ ಇಸ್ಮಾಯಿಲ್, ಕೆರೆಹಳ್ಳಿ ಉಮೇಶ್, ಪ್ರಭುಸ್ವಾಮಿ, ಸದಾಶಿವ, ರಾಜ್‌ಕುಮಾರ್, ಮಹದೇವಸ್ವಾಮಿ, ರಾಜೇಶ್, ಕೃಷ್ಣಹಳೇಪುರ, ನಂಜುಂಡನಾಯಕ ಸಾಗಡೆ, ಮಾದೇಶ್ ಹೊಂಗನೂರು, ಮಧುಸೂದನ್ ಹೊಸಹಳ್ಳಿ, ಮಧು ಕೆಬ್ಬೇಪುರ, ಬಸವಣ್ಣ ಹೊನ್ನಹಳ್ಳಿ ಇತರರು ಹಾಜರಿದ್ದರು.