ಅಹವಾಲು ಸ್ವೀಕಾರ ಸಭೆ:ನಗರಸಭೆ ವಿರುದ್ಧ ಜನಾಕ್ರೋಶ

ಅಹವಾಲು ಸ್ವೀಕಾರ ಸಭೆ:ನಗರಸಭೆ ವಿರುದ್ಧ ಜನಾಕ್ರೋಶ
Published on

ಹಾಸನ: ವಿದ್ಯಾನಗರದ ಫ್ರೀಡಂ ಪಾರ್ಕ್‌ನಲ್ಲಿ ಬುಧವಾರ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ ನೇತೃತ್ವದಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ನಗರಸಭೆ ಆಯುಕ್ತರು ಹಾಗೂ ಅಧಿಕಾರಿಗಳ ಬಗ್ಗೆ ಬಡಾವಣೆ ಜನರು ಆಕ್ರೋಶ ವ್ಯಕ್ತಪಡಿಸಿದರು. ಅವರನ್ನು ನಿಯಂತ್ರಿಸಲು ಶಾಸಕರು ಹರಸಾಹಪಟ್ಟರು.
ಸಭೆ ಆರಂಭವಾಗುತ್ತಿದ್ದಂತೆ ನಿವಾಸಿಗಳು ನಗರ ಸಭೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆಗೆ 25 ಹಳ್ಳಿಗಳು ಸೇರ್ಪಡೆಯಾದ ಬಳಿಕ ವಿವಿಧ ಕೆಲಸಗಳಿಗೆ ಜನರು ತೆರಳಿದಾಗ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವರ್ತನೆ ನಮಗೆ ಬೇಸರ ತಂದಿದೆ. ಕೂಡಲೇ ಶಾಸಕರು ಹಾಗೂ ನಗಾರಭೆ ಅಧ್ಯಕ್ಷರು ಹಾಗೂ ಆಯುಕ್ತರು ತಮ್ಮ ಸಿಬ್ಬಂದಿಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಒತ್ತಾಯಿಸಿದರು.
ಸಾರ್ವಜನಿಕರ ಕೆಲಸಗಳು ವಿಳಂಬ ಹಾಗೂ ಅವರ ಜೊತೆ ದುರ್ವರ್ತನೆ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ನಗರಸಭೆಯಲ್ಲಿ ಲಂಚ ಭಾರಿ ಸದ್ದು ಮಾಡುತ್ತಿದೆ. ಹಣ ನೀಡಿದರೆ ಯಾವ ಕೆಲಸ ಬೇಕಾದರೂ ನಡೆಯುತ್ತದೆ ಎಂಬ ಮಟ್ಟಕ್ಕೆ ನಗರಸಭೆ ಬಂದು ನಿಂತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಅಮೃತ್ ಯೋಜನೆ ಅಡಿ ಕುಡಿಯುವ ನೀರಿನ ಯೋಜನೆ ಅರ್ಧಕ್ಕೆ ನಿಂತಿದೆ. ಕೂಡಲೇ ಅದನ್ನು ಪೂರ್ಣಗೊಳಿಸಿ, ಬಡಾವಣೆ ನಿವಾಸಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕೆಲವೆಡೆ ವಿದ್ಯುತ್ ಕಂಬಗಳ ಸಮಸ್ಯೆ ನಿವಾರಿಸಿ ಸಮರ್ಪಕ ವಿದ್ಯುತ್ ಒದಗಿಸಬೇಕು ಎಂದು ಶಾಸಕರಿಗೆ ಬಡಾವಣೆ ನಿವಾಸಿಗಳು ಮನವಿ ಮಾಡಿದರು.
ಪಾರ್ಕ್‌ನಲ್ಲಿ ಕೆಲ ಸಮಸ್ಯೆಗಳಿದ್ದು ಅವುಗಳನ್ನು ಸರಿಪಡಿಸಬೇಕು ಮತ್ತು ಇಲ್ಲಿ ಪ್ರತಿನಿತ್ಯ ನಿವಾಸಿಗಳು ವಾಯುವಿಹಾರ ಮಾಡುತ್ತಾರೆ.
ಅಲ್ಲದೆ ಪಾರ್ಕ್ ಪಕ್ಕದಲ್ಲೇ ದನಕರುಗಳನ್ನು ಕಟ್ಟಿ ಸಗಣಿ ತಿಪ್ಪೆ ನಿರ್ಮಾಣ ಮಾಡಿಕೊಂಡು ಇದರಿಂದ ಸೊಳ್ಳೆ ಹಾಗೂ ಇನ್ನಿತರ ಸಮಸ್ಯೆ ಗಳು ಎದುರಾಗಿದೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಬಳಿಕ ಶಾಸಕ ಸ್ವರೂಪ್ ಮಾತನಾಡಿ, ನಗರಸಭೆಯಲ್ಲಿ ಅಧಿಕಾರಿಗಳ ವರ್ತನೆ ಬದಲಾಯಿಸಿಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸಭೆಯಲ್ಲೇ ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು. ಈ ಖಾತಾ ಬಗ್ಗೆ ಅನೇಕ ದೂರುಗಳು ಕೇಳಿ ಬಂದಿದ್ದು,ಅವುಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಶೀಘ್ರವಾಗಿ ಸಮಸ್ಯೆ ಬಗೆ ಹರಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಆಯುಕ್ತ ನರಸಿಂಹ ಮೂರ್ತಿ, ನಗರಸಭೆ ಸದಸ್ಯರು ಹಾಗೂ ಬಡಾವಣೆ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net