

ಚಿಕ್ಕಮಗಳೂರು: ಸಮಾಜದ ಒಳಿತಿಗಾಗಿ ಸತ್ಕಾರ್ಯ, ಸಾಮಾಜಿಕ ಕೆಲಸಗಳನ್ನು ಪೂರೈಸಿದರೆ ಶನೇಶ್ವರಸ್ವಾಮಿ ಹರಸುತ್ತಾನೆ, ನನ್ನಿಂದಲೇ ಎಲ್ಲವೂ ಎಂದು ಹೇಳಿಕೊಳ್ಳುವ ಮತ್ತು ಅಹಂನಿಂದ ಮರೆದವನಿಗೆ ಶನಿದೇವರು ಹೆಗಲೇರಿ ಬದುಕಿನಲ್ಲಿ ತಕ್ಕಪಾಠ ಕಲಿಸುತ್ತಾನೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ತಾಲೂಕಿನ ಅಲ್ಲಂಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಶನೀಶ್ವರ ದೇವಾಲಯಕ್ಕೆ ಗುದ್ದಲಿಪೂಜೆ ನೆರವೇರಿಸಿ ಭಾನುವಾರ ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಸಾವಿರಾರು ದೇವತೆಗಳಿವೆ. ಅದರಲ್ಲಿ ಶ್ರೀ ಶನೇಶ್ವರಸ್ವಾಮಿಗೆ ಜನಸಾಮಾನ್ಯರು ಜೀವನದಲ್ಲಿ ಕಂಟಕ ಎದುರಾಗದಂತೆ ನೆಮ್ಮದಿಯಿಂದ ಬದುಕಲು ಮೊದಲು ಪೂಜೆ ಸಲ್ಲಿಸುವ ಪರಿಪಾಠವಿದೆ. ಹಾಗಾಗಿಯೇ ಶ್ರಾವಣ ಮಾಸದಲ್ಲಿ ಬಹುತೇಕ ಕುಟುಂಬಗಳು ಶನೇಶ್ವರ ಕಥೆ ಹೇಳಿಸುತ್ತಾರೆ ಎಂದರು.
ಇಂದಿನ ಯುವಜನತೆಗೆ ದೇಗುಲಗಳ ಅರಿವು ಮೂಡಿಸುವ ಜೊತೆಗೆ ಪಾಲಕರು ರಾಷ್ಟ್ರ ಪ್ರೇಮ, ದೇಶ ಭಕ್ತಿಯ ಪಾಠವನ್ನು ಬೋಧಿಸಬೇಕು. ನಂತರ ಮನೆ, ವೈಯಕ್ತಿಕ ಜೀವನಕ್ಕೆ ಆದ್ಯತೆ ನೀಡುವುದು ಮುಖ್ಯ ವಾಗಿದೆ. ಸಮಾಜದಲ್ಲಿ ಉಳ್ಳವರು, ಬಡವರು ಎಲ್ಲರೂ ಜೀವಿಸುತ್ತಿದ್ದಾರೆ. ಆದರೆ ನಾನು ಎಂಬ ಅಹಂ ಇರುವವರಿಗೆ ಶನೇಶ್ವರಸ್ವಾಮಿಯ ವಕ್ರದೃಷ್ಟಿ ತಟ್ಟಲಿದೆ ಎಂದು ಹೇಳಿದರು.
ಹಲವಾರು ವರ್ಷಗಳಿಂದ ನೆಲೆಸಿದ್ಧ ಶ್ರೀ ಶನೇಶ್ವರಸ್ವಾಮಿ ಪುರಾತನ ದೇವಾಲಯವನ್ನು ಹೊಸದಾಗಿ ನಿರ್ಮಿಸಿ ಭಕ್ತಾಧಿಗಳಿಗೆ ಅನುಕೂಲಕ್ಕೆ ಮುಂದಾಗಿರುವ ಗ್ರಾಮಸ್ಥರು, ಸಮಿತಿಯ ಪದಾಧಿಕಾರಿಗಳ ಕಾರ್ಯ ಉತ್ತಮವಾಗಿದೆ. ಮುಂದೆಯು ಅಲ್ಲಂಪುರ ಗ್ರಾಮಸ್ಥರ ಶ್ರೇಯೋಭಿವೃಧ್ದಿ ಕಾರ್ಯಗಳಿಗೆ ಸದಾ ಕೈಜೋಡಿಸುತ್ತೇನೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯಿತ್ರಿ ಶಾಂತೇಗೌಡ ಮಾತನಾಡಿ, ಅಲ್ಲಂಪುರ ಭಾಗದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನ ಕೈಗೊಂಡಿದ್ದೇವೆ ಹಾಗೂ ಪಂಚಗ್ಯಾರಂಟಿ ಯೋಜನೆಗಳು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಬಹಳಷ್ಟು ಶಕ್ತಿ ಕೊಟ್ಟಿದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಕೆ.ಆರ್.ಅನಿಲ್‌ಕುಮಾರ್ ಮಾತನಾಡಿ, ದೇವಾಲಯ ಅಭಿವೃದ್ದಿಗೆ ಇದೀಗ ಚಾಲನೆ ನೀಡಲಾಗಿದೆ. ಶಾಸಕರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರು ಸಮರ್ಪಕ ಅನುದಾನ ಒದ ಗಿಸಿಕೊಟ್ಟಲ್ಲಿ ದೇವಾಲಯ ನಿರ್ಮಾಣಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಎನ್.ಲೋಕೇಶ್, ದೇವಾಲಯ ಪ್ರಧಾನ ಅರ್ಚಕ ಎಂ.ಆರ್.ಅನಂತು, ದೇವಾಲಯ ಸಮಿತಿ ಪದಾಧಿಕಾರಿಗಳಾದ ನಾಗರಾಜ್, ಮೋಹನ್‌ಕುಮಾರ್, ತಿಮ್ಮಯ್ಯ, ಶಿವಕುಮಾರ್, ಮಂಜುನಾಥ್, ಅಮರನಾಥ್, ಬಸವರಾಜು, ರವಿಕುಮಾರ್, ಕೇಶವಮೂರ್ತಿ, ಲೋಕೇಶ್, ಪರಮೇಶ್, ಕುಮಾರ್ ಹಾಗೂ ಗ್ರಾಪಂ ಅಧ್ಯಕ್ಷರು ಮತ್ತಿತರರಿದ್ದರು.