

ಬೆಂಗಳೂರು ಗ್ರಾಮಾಂತರ: ಮೂರು ಬಾರಿ ಶಾಸಕನಾಗಿ, ಎರಡು ಬಾರಿ ಸಚಿವನಾಗಿ ಹೊಸಕೋಟೆ ತಾಲೂಕಿನಲ್ಲಿ ಹೇಗೆ ನಡೆದುಕೊಂಡಿದ್ದೇನೆ ಎಂಬುದು ಕ್ಷೇತ್ರದ ಜನತೆಗೆ ತಿಳಿದಿದೆ. ಯಾರು ಅಹಂನಿಂದ ವರ್ತಿಸುತ್ತಾರೆ ಎಂಬುದಕ್ಕೆ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನರೇ ಉತ್ತರಿಸುತ್ತಾರೆ ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಗರುಡಾಚಾರ್‌ಪಾಳ್ಯದ ಸಚಿವರ ಗೃಹಕಚೇರಿ ಬಳಿ ಸೋಮವಾರ ವಿವಿಧ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದ ಯುವಕರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು. ಕಾರ್ಯಕ್ರಮವೊಂದರಲ್ಲಿ ಸ್ಥಳೀಯ ಶಾಸಕರು ನನಗೆ ಅಹಂ ಇದೆ ಎಂಬುದಾಗಿ ಮಾತನಾಡಿರುವುದು ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದೆ. ಈ ರೀತಿ ಸಚಿವ ಸ್ಥಾನ ಹಾಗೂ ಹಿರಿತನವನ್ನೂ ಪರಿಗಣಿಸದೆ ಮಾತನಾಡುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದರು.
ತಂದೆಗಿರುವ ಸೌಜನ್ಯವಿಲ್ಲ: ಸಂಸದ ಬಿ.ಎನ್.ಬಚ್ಚೇಗೌಡರು ರಾಜಕೀಯವಾಗಿ ವಿರೋಧಿಯಾದರೂ ಯಾವುದೇ ಕಾರ್ಯಕ್ರಮದಲ್ಲಿ ಎದುರಿಗೆ ಸಿಕ್ಕರೂ ಔಪಚಾರಿಕವಾಗಿ ಮಾತನಾಡುತ್ತಾರೆ, ಮೂರು ಬಾರಿ ಸೋತಾಗಲೂ ಎಲ್ಲಿಯೂ ಹಗುರವಾಗಿ ಮಾತನಾಡಿಲ್ಲ, ಸಿಎಂ ಕಾರ್ಯಕ್ರಮದಲ್ಲಿಯೂ ನನ್ನ ಹೆಸರು ಉಲ್ಲೇಖಿಸಿ ಅಭಿನಂದಿಸಿದರು. ಅವರಲ್ಲಿನ ಒಂದಂಶದ ಸೌಜನ್ಯವೂ ಶಾಸಕರಿಗೆ ಬಂದಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಸ್ಮಶಾನವನ್ನೂ ಬಿಟ್ಟಿಲ್ಲ: ಶಾಂತನಾಪುರ ಭೂಕಬಳಿಕೆ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರ ಎಸಿಬಿ ತನಿಖೆಗೊಳಪಡಿಸಿದೆ, ಸರ್ಕಾರಿ ಜಾಗ, ಗುಂಡುತೋಪು, ಬಡವರ ಜಮೀನು ಸೇರಿ ಸ್ಮಶಾನ ಜಾಗವನ್ನೂ ಬಿಟ್ಟಿಲ್ಲ, ಇಂಥವರು ನನ್ನ ಬಗ್ಗೆ ಹಗುರವಾಗಿ ಮಾತನಾಡಲು ಯಾವ ನೈತಿಕತೆ ಇದೆ ಎಂಬುದು ತಿಳಿಯುತ್ತಿಲ್ಲ ಎಂದು ಸಚಿವರು ಹರಿಹಾಯ್ದರು. ಈಗಾಗಲೇ ಹಲವು ಬಾರಿ ಮಾಧ್ಯಮಗಳ ಮುಂದೆ ಶಾಂತನಾಪುರ ಜಮೀನು ಕಬಳಿಕೆ ಬಗ್ಗೆ ಸಾಕಷ್ಟು ಬಾರಿ ಪ್ರಸ್ತಾಪಿಸಿದ್ದೇನೆ, ಇದರಲ್ಲಿ ಯಾವುದೇ ಅಕ್ರಮವಿಲ್ಲ ಎನ್ನುವುದಾದರೆ ದಾಖಲೆಗಳನ್ನು ಪ್ರದರ್ಶಿಸಲಿ ಎಂದು ಪುನರುಚ್ಚರಿಸಿದರು.
ಬಿಜೆಪಿಗೆ ಯುವಕರ ಸ್ವಾಗತ: ಮುಖಂಡರಾದ ಪಿಳಗುಂಬ ಸ್ವಾಮಿ, ಹನುಮರಾಜು ಹಾಗೂ ರಾಮಾಂಜಿ ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದ 50ಕ್ಕೂ ಹೆಚ್ಚು ಯುವಕರನ್ನು ಸಚಿವರು ಕೇಸರಿ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಬಿಜೆಪಿ ಮತ್ತಷ್ಟು ಬಲಗೊಳ್ಳುವಂತೆ ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಬೇಕು, ಸರ್ಕಾರದ ಸೌಲಭ್ಯಗಳನ್ನು ಅರ್ಹರ ಮನೆಬಾಗಿಲಿಗೆ ತಲುಪಿಸುವುದು, ಹಾಗೆಯೇ ಸರ್ಕಾರದ ಸಾಧನೆ, ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವುದು ಕಾರ್ಯಕರ್ತರ ಕರ್ತವ್ಯ ಎಂದು ಸಚಿವರು ತಿಳಿಸಿದರು.