ಅಹಂ ತೊರೆದರೆ ಪರಿಪೂರ್ಣತೆ: ಪ್ರೊ.ಎಂ.ಕೃಷ್ಣೇಗೌಡ

mysore
Published on

ಮೈಸೂರು: ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ಅಧ್ಯಯನ ಮತ್ತು ಪರಿಶ್ರಮ ಇದ್ದರೆ ಬದುಕಿನಲ್ಲಿ ಯಶಸ್ಸು ಸಾಧಿಸಬಹುದು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಎಂ. ಕೃಷ್ಣೇಗೌಡ ಹೇಳಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳು ಜ್ಞಾನಾರ್ಜನೆಗಿಂತ ಮನೋರಂಜನೆಯನ್ನು ಚಟವಾಗಿಸಿಕೊಂಡಿದ್ದಾರೆ. ಮೊಬೈಲ್ ಅವರ ಜೀವನದ ಭಾಗವಾಗಿ ಬಿಟ್ಟಿದೆ. ಮೂರು ದಶಕಗಳ ಹಿಂದೆ ನಿರುದ್ಯೋಗದ ಸಮಸ್ಯೆ ಇತ್ತು.

ಆದರೆ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಸೃಷ್ಟಿಸಿಕೊಳ್ಳುವ ಅವಕಾಶವಿದೆ. ಆದರೆ ಅದಕ್ಕೆ ಸ್ವಸಾಮರ್ಥ್ಯ ಮತ್ತು ಸ್ವನಿರ್ಣಯವಿರಬೇಕು ಎಂದು ಹೇಳಿದರು.

ಇಂದಿನ ಯುವಜನತೆ ಬದುಕನ್ನು ಆಚರಣೆಯ ರೀತಿಯಲ್ಲಿ ಆಸ್ವಾದಿಸುತ್ತಿದ್ದಾರೆ. ಬದುಕಿನಲ್ಲಿ ಅಭಾವಗಳ ಅನುಭವವಾಗಲಿ ಮತ್ತು ಗಂಭೀರತೆಯಾಗಲಿ ಅವರಿಗಿಲ್ಲ. ಹೀಗಾಗಿ ಇಂತಹ ಜನಾಂಗವನ್ನು ಉತ್ಪಾದಕ ಜನಾಂಗವಾಗಿ ಬದಲಾಯಿಸುವ ಸವಾಲು ಸಮಾಜಕ್ಕಿದೆ.

ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧಿಸಲು ಮತ್ತು ಪರಿಪೂರ್ಣತೆಯನ್ನು ಹೊಂದಲು ಮೊದಲು ಅಹಂ ಭಾವವನ್ನು ಬಿಡಬೇಕು. ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬೇಕು. ನೀವು ಮಾಡುವ ಕೆಲಸದ ಸ್ಪಷ್ಟ ಉದ್ದೇಶದ ಅರಿವು ನಿಮಗಿರಬೇಕು ಎಂದು ಹೇಳಿದರು.

ಖೋ ಖೋ ವಿಶ್ವಕಪ್ ವಿಜೇತೆ ಬಿ.ಚೈತ್ರಾ ಮಾತನಾಡಿ, ಎಲ್ಲ ಸೌಕರ್ಯಗಳಿದ್ದೂ ಸಾಧಿಸುವುದು ಸಾಧನೆಯಲ್ಲ. ಏನೂ ಸೌಲಭ್ಯವಿಲ್ಲದೇ ಎಲ್ಲ ಕೊರತೆಗಳನ್ನು ಮೆಟ್ಟಿನಿಂತು ಮಾಡುವುದು ನಿಜವಾದ ಸಾಧನೆ. ಕೇವಲ ಮೊಬೈಲ್‌ನಲ್ಲಿ ಮುಳುಗಿ ಸಮಯ ವ್ಯರ್ಥ ಮಾಡದೇ ನಿರ್ದಿಷ್ಟ ಗುರಿಯನ್ನು ರೂಪಿಸಿಕೊಂಡು ಅದನ್ನು ಸಾಕಾರಗೊಳಿಸಿಕೊಳ್ಳುವಲ್ಲಿ ನೀವೆಲ್ಲರೂ ನಿರತರಾಗಬೇಕು. ನನ್ನ ಸಾಧನೆಗೆ ಬೆನ್ನೆಲುಬಾಗಿರುವ ತರಬೇತುದಾರರಾದ ಮಂಜುನಾಥ್ ಅವರನ್ನು ಇದೇ ಸಂದರ್ಭದಲ್ಲಿ ಸ್ಮರಿಸಬಯಸುತ್ತೇನೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಪ್ರಭು ಮಾತನಾಡಿ, ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳು ನಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿವೆ. ಕಲೆ ಮತ್ತು ಸಾಹಿತ್ಯ ಎಲ್ಲ ಕಾಲಕ್ಕೂ ಪ್ರಸ್ತುತವಾದದ್ದು. ಆದ್ದರಿಂದ ವಿದ್ಯಾರ್ಥಿಗಳು ಈ ವೇದಿಕೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಕಾಲೇಜುಗಳು ವಿದ್ಯಾರ್ಥಿಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗದೆ ಮಾನವ ಸಂಪನ್ಮೂಲ ಕೇಂದ್ರಗಳಾಗಬೇಕು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪಠ್ಯಗಳಷ್ಟೇ ಪಠ್ಯೇತರ ಚಟುವಟಿಕೆಗಳೂ ಅತ್ಯವಶ್ಯಕ, ಬದುಕಿನಲ್ಲಿ ಕನಸು, ಸಾಧಿಸುವ ಛಲ, ಬಯಕೆ ಹಾಗೂ ನಿಶ್ಚಲ ಗುರಿ ಇರಬೇಕು ಎಂದರು.

ಖೋ ಖೋ ವಿಶ್ವಕಪ್ ವಿಜೇತೆ ಬಿ.ಚೈತ್ರಾ ಮತ್ತು ಆರ್‌ಡಿಸಿ, ಸೈನಿಕ್ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳಾದ ಕನ್ನಿಕಾ, ಎಂ.ಎಂ.ದರ್ಶನ್, ಎ.ಚಂದನ್, ಎನ್‌ಎಸ್‌ಎಸ್ ವಿದ್ಯಾರ್ಥಿಗಳಾದ ಅನನ್ಯ ಹಾಗೂ ಆರ್. ಕಿರಣ್ ಅವರನ್ನು ಸನ್ಮಾನಿಸಲಾಯಿತು.

ನಂತರ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಸಿ.ಆರ್.ಮಧುಸೂದನ್, ಕ್ರೀಡಾ ವೇದಿಕೆ ಸಂಚಾಲಕ ಎಂ. ಕಾರ್ತಿಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net