

ಹನಗೋಡು: ನಾಗರಹೊಳೆ ಉದ್ಯಾನವನದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದ ಸುಬ್ರಹ್ಮಣ್ಯ (50) ಎನ್ನುವ ಆನೆ ಅಸ್ವಸ್ಥಗೊಂಡು ಶುಕ್ರವಾರ ಸಂಜೆ ಮೃತಪಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಪುಂಡಾಟ ನಡೆಸಿ ಇಬ್ಬರ ಸಾವಿಗೆ ಕಾರಣವಾಗಿದ್ದ ಈ ಗಂಡಾನೆಯನ್ನು ಸೆರೆ ಹಿಡಿದು ನಾಗರಹೊಳೆ ಉದ್ಯಾನವನದ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಿ ಕ್ರಾಲ್‌ನಲ್ಲಿಡಲಾಗಿತ್ತು. ಈ ಆನೆಗೆ ಸುಬ್ರಹ್ಮಣ್ಯ ವಲಯದಲ್ಲಿ ಸೆರೆ ಸಿಕ್ಕಿದ್ದರಿಂದಾಗಿ ‘ಸುಬ್ರಹ್ಮಣ್ಯ’ನೆಂದು ನಾಮಕರಣ ಮಾಡಲಾಗಿತ್ತು. ಹೆಚ್ಚಿನ ತರಬೇತಿಗಾಗಿ ಇತ್ತೀಚೆಗೆ ಕ್ರಾಲ್‌ನಿಂದ ಬಂಧಮುಕ್ತಗೊಳಿಸಿ ಮಾವುತ ಶಿವು, ಕವಾಡಿ ಚಂದ್ರ ತರಬೇತಿ ನೀಡುತ್ತಿದ್ದರು.
ಆನೆ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದ ಸುಬ್ರಹ್ಮಣ್ಯ ಶುಕ್ರವಾರ ಮಲಗಿದಲ್ಲೇ ಅಸ್ಪಸ್ಥಗೊಂಡಿದ್ದ. ನಾಗರಹೊಳೆ ಪಶುವೈದ್ಯ ಡಾ.ರಮೇಶ್ ಚಿಕಿತ್ಸೆ ನೀಡಿದರಾದರೂ ಮೇಲೇಳಿಸುವ ಪ್ರಯತ್ನ ಸಫಲವಾಗಲಿಲ್ಲ. ಕ್ರೇನ್ ತರಿಸಿ ಎದ್ದು ನಿಲ್ಲಿಸುವ ಯತ್ನವೂ ವಿಫಲವಾಗಿ ಅಂದೇ ಸಂಜೆ ವೇಳೆಗೆ ಮೃತಪಟ್ಟಿದೆ ಎಂದು ಹುಲಿಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.
ಶನಿವಾರ ಹುಣಸೂರು ವನ್ಯಜೀವಿ ಉಪವಿಭಾಗದ ಪಶುವೈದ್ಯಾಧಿಕಾರಿ ಡಾ.ಚೆಟ್ಟಿಯಪ್ಪ, ದುಬಾರೆ ಶಿಬಿರದ ಪಶುವೈದ್ಯ ಡಾ.ಮದನ್ ಗೋಪಾಲ್, ಮೈಸೂರು ಲೀಲಾಪೆಟ್ ಆಸ್ಪತ್ರೆಯ ಡಾ.ಎಚ್.ರಮೇಶ್ ಅವರು ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ದಯಾನಂದ, ಆರ್‌ಎಫ್‌ಒ ದಿಲೀಪ್‌ಕುಮಾರ್ ಸಮ್ಮುಖದಲ್ಲಿ ಸುಬ್ರಹ್ಮಣ್ಯ ಆನೆಯ ಶವ ಪರೀಕ್ಷೆ ನಡೆಸಿದರು.
ಆನೆಯು ಬಹು ಅಂಗಾಂಗ ವೈಫಲ್ಯ ಕಾಯಿಲೆ (ಆರ್ಥಿಟಿಸ್)ಯಿಂದ ಸೆಪ್ಟಿಸೀಮಿಯಾ (ಇನ್‌ಫೆಕ್ಷನ್)ನಿಂದ ಬಳಲಿ ಮೃತಪಟ್ಟಿರುವುದಾಗಿ ಪಶುವೈದ್ಯರ ತಂಡ ಮಾಹಿತಿ ನೀಡಿದ್ದು, ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಆನೆಯ ಶವವನ್ನು ಹೂತಿರುವುದಾಗಿ ಡಿಸಿಎಫ್ ಮಾಹಿತಿ ನೀಡಿದರು.