

ಬೈಲಹೊಂಗಲ: ಸರ್ಕಾರ ಕೋಟ್ಯಂತರ ರೂ. ವೆಚ್ಚ ಮಾಡಿ ನೂತನವಾಗಿ ನಿರ್ಮಿಸಿರುವ ಪಟ್ಟಣದ ಹೈಟೆಕ್ ಬಸ್ ನಿಲ್ದಾಣ ಅಸ್ವಚ್ಛತೆಯ ತಾಣವಾಗಿ ಮಾರ್ಪಟ್ಟಿದೆ. ನಿಲ್ದಾಣದ ಆವರಣ ಕಸ, ತ್ಯಾಜ್ಯ ಚೆಲ್ಲಿದ್ದು, ದುರ್ವಾಸನೆಗೆ ಪ್ರಯಾಣಿಕರು ರೋಸಿ ಹೋಗಿದ್ದಾರೆ.
ನಿರ್ವಹಣೆ ಕೊರತೆಯಿಂದ ಪಟ್ಟಣದ ಬಸ್ ನಿಲ್ದಾಣ ಅಸ್ವಚ್ಛತೆಯ ತಾಣವಾಗಿ ಬದಲಾಗಿದೆ. ಎಲ್ಲೆಡೆ ಕಸದ ರಾಶಿ ರಾರಾಜಿಸುತ್ತಿದ್ದು, ನಿತ್ಯ ವಿಲೇವಾರಿಯಾಗದೆ ಪ್ಲಾಟ್‌ಫಾರ್ಮ್ ಪಕ್ಕದಲ್ಲೇ ಕಸ ಎಸೆಯುತ್ತಿರುವುದು ಸಾಮಾನ್ಯವಾಗಿದೆ.
ಬಸ್ ನಿಲ್ದಾಣ ಆರಂಭವಾದರೂ ಇನ್ನೂ ಕೆಲ ಕಾಮಗಾರಿಗಳು ಮುಗಿದಿಲ್ಲ. ಇದರಿಂದ ನಿಲ್ದಾಣದಲ್ಲಿ ಸದಾ ಧೂಳು ಏಳುತ್ತಿದೆ. ಕ್ಯಾಂಟೀನ್ ಛಾವಣಿಯಲ್ಲಿನ ನೀರು, ನಿಲ್ದಾಣದ ಆವರಣದಲ್ಲೇ ಹರಿಯುತ್ತಿರುವುದರಿಂದ ನಾಗರಿಕರು ಸಮಸ್ಯೆ ಎದುರಿಸುವಂತಾಗಿದೆ. ಕ್ಯಾಂಟಿನ್ ಪಕ್ಕದಲ್ಲೇ ಇರುವ ಕುಡಿಯುವ ನೀರಿನ ಘಟಕದ ಸುತ್ತಲೂ ಸ್ವಚ್ಛತೆ ಮಾಯವಾಗಿದೆ.
ಬಸ್ ಹೊರಹೋಗುವ ಪ್ರದೇಶದಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಚಾಲಕರು ಆತಂಕದಲ್ಲಿಯೇ ಚಾಲನೆ ಮಾಡಬೇಕಾಗಿದೆ. ನಿಲ್ದಾಣದ ಆವರಣದಲ್ಲಿ ಎಲ್ಲೆಡೆ ಕಾರು, ಅಟೋ, ದ್ವಿಚಕ್ರ ವಾಹನಗಳು ನಿಲ್ಲಿಸಲಾಗುತ್ತಿದ್ದು, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲವಾಗಿದೆ. ನಿಲ್ದಾಣದಲ್ಲಿ ಕುಳಿತುಕೊಳ್ಳಲು ಹೆಚ್ಚಿನ ಆಸನಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಿಸಿ ಜನರ ಸಮಸ್ಯೆ ಪರಿಹರಿಸಬೇಕಿದೆ.