

ಹನೂರು: ಸಮಾಜದಲ್ಲಿದ್ದ ಅಸ್ಪಶ್ಯತೆ ಹಾಗೂ ಅಸಮಾನತೆಯನ್ನು ಹೊಗಲಾಡಿಸುವಲ್ಲಿ ಹಾಗೂ ರೈತರು ಸ್ವಾವಲಂಬಿಗಳಾಗಲು ಡಾ.ಬಾಬು ಜಗಜೀವನರಾಮ್ ಅವರ ಕೊಡುಗೆ ಅಪಾರ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಚಯ್ಯ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಭಾನುವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಅವರ 39ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಿಸಿ ಮಾತನಾಡಿದರು.
ಹಿಂದುಳಿದ ಸಮಾಜದಲ್ಲಿ ಜನಿಸಿದ ಬಾಬೂಜಿ ಅವರ ಕಾಲಘಟ್ಟದಲ್ಲಿ ಅಸ್ಪಶ್ಯತೆ ಹಾಗೂ ಅಸಮಾನತೆ ತಾಂಡವವಾಡುತ್ತಿತ್ತು. ಈ ದೆಸೆಯಲ್ಲಿ ಅವರು ಹಿಂದುಳಿದವರ ಬಗ್ಗೆ ವಿಶೇಷ ಕಾಳಜಿ ವಹಿಸಿ ಹೋರಾಟ ನಡೆಸಿ ಉತ್ತಮ ಸಮಾಜಕ್ಕೆ ಶ್ರಮಿಸಿದ ಮಹಾನ್ ನಾಯಕ. ಇವರು ಹೋರಾಟಗಾರರಷ್ಟೇ ಅಲ್ಲ. ಸಮಾಜ ಸೇವಕರು ಆಗಿದ್ದು, ಕಾರ್ಯ ವೈಖರಿಯಿಂದಲೇ ರಾಜಕೀಯದಲ್ಲಿ ಉನ್ನತ ಸ್ಥಾನವನ್ನು ಪಡೆದರು.
ನೆಹರೂ ಅವರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದರು. ಮುರಾರ್ಜಿ ದೇಸಾಯಿ ಆಡಳಿತದಲ್ಲಿ ಉಪ ಪ್ರಧಾನಿಯಾಗಿದ್ದರು. ಕೃಷಿ, ರಕ್ಷಣೆ, ಕೈಗಾರಿಕೆ ಸಚಿವರಾಗಿ ದಕ್ಷತೆಯಿಂದ ನಿಭಾಯಿಸಿದ್ದು, ದೇಶದ ಅಭಿವೃದ್ಧಿಗೆ ದೂರದೃಷ್ಟಿಯುಳ್ಳವರಾಗಿದ್ದರು. ದೇಶದಲ್ಲಿ 1974ರಲ್ಲಿ ಬರ ಪರಿಸ್ಥಿತಿ ಎದುರಾಗಿದ್ದ ವೇಳೆ ಆಹಾರ ಉತ್ಪಾದನೆ ಹೆಚ್ಚಿಸುವುದರ ಜತೆಗೆ ರೈತರನ್ನು ಸ್ವಾವಲಂಬಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಹಸಿರು ಕ್ರಾಂತಿ ಮಾಡಿದ ಪಿತಾಮಹ ಎನಿಸಿಕೊಂಡಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪಟ್ಟಣ ಸದಸ್ಯ ಸುದೇಶ್ ಮಾತನಾಡಿ, ಬಾಬೂಜಿ ಅವರು ಬಡ ಕುಟುಂಬದಲ್ಲಿ ಜನಿಸಿದ್ದು, ದೀನ ದಲಿತರ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ನಾಯಕ. ಇವರ ಪ್ರಾಮಾಣಿಕ ಹಾಗೂ ದಕ್ಷ ಆಡಳಿತ ರಾಜಕೀಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಉತ್ತಮ ಸೇವೆಯನ್ನು ನೀಡಿದ್ದಾರೆ. ಆದರೆ, ಅಧಿಕಾರದಲ್ಲಿ ಇರುವಾಗಲೇ ಇವರು ನಿಧನರಾದದ್ದು ನಿಜಕ್ಕೂ ನೋವಿನ ಸಂಗತಿ. ಆದರೆ, ಇವರು ದೇಶಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಉತ್ತಮ ಸಮಾಜಕ್ಕೆ ಇಂದಿಗೂ ಸ್ಫೂರ್ತಿದಾಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಆರ್‌ಐ ಶೇಷಣ್ಣ, ಗ್ರಾಮ ಆಡಳಿತಾಧಿಕಾರಿ ಕಾರ್ತಿಕ್, ಕಂದಾಯ ಇಲಾಖೆಯ ಸಿದ್ದರಾಜು, ತಾಲೂಕು ಪಂಚಾಯಿತಿಯ ಸುರೇಶ್, ಹಾಸ್ಟೆಲ್ ವಾರ್ಡನ್ ಸುಂದ್ರಮ್ಮ ನೌಕಕರಾದ ಮಧುಸೂದನ್, ಸುರೇಶ್ ಹಾಗೂ ಇನ್ನಿತರರು ಇದ್ದರು.