

ಮೈಸೂರು: 21ನೇ ಶತಮಾನದಲ್ಲೂ ಅಸಮಾನತೆ, ಅಸ್ಪಶ್ಯತೆ ಜೀವಂತವಾಗಿರುವುದು ವಿಪರ್ಯಾಸದ ಸಂಗತಿ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ಬೇಸರ ವ್ಯಕ್ತಪಡಿಸಿದರು.
ಸಮಾನತೆ, ಸ್ವಾಭಿಮಾನ, ಸ್ವಾವಲಂಬನೆ ಪ್ರತಿಷ್ಠಾನ ನಗರದ ಕೃಷ್ಣಮೂರ್ತಿಪುರಂನ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿ ಗುರುವಾರ ಆಯೋಜಿಸಿದ್ದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ಅಸ್ಪಶ್ಯತೆ ಈಗಲೂ ಆಚರಣೆಯಲ್ಲಿದೆ. ಕಾನೂನುಗಳು ಇದ್ದರೂ ಅಸ್ಪಶ್ಯತೆ ನಿಂತಿಲ್ಲ. ಈ ಪಿಡುಗಿನ ವಿರುದ್ಧ ಪ್ರತಿಷ್ಠಾನ ಕೆಲಸ ಮಾಡಲಿದೆ. ದಲಿತರಿಗೆ ಕುಡಿತವೇ ಆಂತರಿಕ ಶತ್ರು. ಅದರಿಂದ ದೂರವಿರಬೇಕು. ಹೆಣ್ಣಾಗಲಿ, ಗಂಡಾಗಲಿ ಎರಡು ಮಕ್ಕಳು ಸಾಕು. ಆ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಬೇಕು ಎಂದು ಬುದ್ಧಿಮಾತು ಹೇಳಿದರು.
ಸಮಾನತೆಗೆ ಸ್ವಾತಂತ್ರ್ಯ, ಭ್ರಾತೃತ್ವ ಇರಬೇಕು. ಆಗ ಮಾತ್ರ ಅದು ಸಾರ್ಥಕವಾಗುತ್ತದೆ. 21ನೇ ಶತಮಾನದಲ್ಲೂ ಅಸಮಾನತೆ, ಅಸ್ಪಶ್ಯತೆ ಜೀವಂತವಾಗಿದ್ದು, ದೌರ್ಜನ್ಯ, ದಬ್ಬಾಳಿಕೆಗಳು, ನಡೆಯುತ್ತಿರುವುದು ವಿಪರ್ಯಾಸದ ಸಂಗತಿ. ಇದನ್ನೆಲ್ಲ ನೋಡಿದರೆ ಇದಕ್ಕೆ ಕೊನೆಯಿಲ್ಲವೆ ಎಂಬ ಪ್ರಶ್ನೆ ಮೂಡುತ್ತದೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಸಿ.ಬಸವರಾಜು, ಪ್ರಧಾನ ಕಾರ್ಯದರ್ಶಿ ಡಾ.ಮುಳ್ಳೂರು ನಂಜುಂಡಸ್ವಾಮಿ, ಸಂಘಟನಾ ಕಾರ್ಯದರ್ಶಿ ಡಾ.ಎಲ್. ರಾಜಶೇಖರಯ್ಯ, ಖಜಾಂಚಿ ಭರತ್ ರಾಮಸ್ವಾಮಿ, ಟ್ರಸ್ಟಿಗಳಾದ ಸಿ.ಜಿ. ಶಿವಕುಮಾರ್, ಡಿ.ವೆಂಕಟರಾಜು, ಕುಂಬ್ರಳ್ಳಿ ಸುಬ್ಬಣ್ಣ, ಮುಖಂಡ ಸಿ. ಬಸವೇಗೌಡ ಹಾಜರಿದ್ದರು.