

ಮೈಸೂರು: ಅಸಮಾನತೆಯನ್ನು ಖಂಡಿಸಲು ಮಹಿಳೆಯರು ಈಗಲೂ ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಎಸ್.ಎಸ್.ಪಾಟೀಲ್ ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಹುಬ್ಬಳ್ಳಿ ಸಮಿತಿ ವತಿಯಿಂದ ನಗರದ ರಾಜೇಂದ್ರ ಭವನದಲ್ಲಿ ಆಯೋಜಿಸಿದ್ದ ‘ಬಸವ ತತ್ವ -ಸಂದೇಶ ಇಂದು ಪ್ರಸ್ತುತ’ ರಾಜ್ಯಮಟ್ಟದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಆಧುನಿಕ ಕಾಲದಲ್ಲೂ ಜಾತಿ, ಮೌಢ್ಯ, ಕಂದಾಚಾರ ತಾಂಡವವಾಡುತ್ತಿದೆ. ಈ ಕಾರಣದಿಂದ ಶಬರಿಮಲೆ ಅಯ್ಯಪ್ಪಸ್ವಾಮಿ ಸೇರಿದಂತೆ ಅನೇಕ ದೇಗುಲಗಳಿಗೆ ಮಹಿಳೆಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮಹಿಳೆಯರು ಸಹ ಅಸಮಾನತೆಯನ್ನು ವಿರೋಧಿಸದೆ ಮೌನವಾಗಿದ್ದಾರೆ. ಇತ್ತೀಚೆಗೆ ಚಾಮರಾಜನಗರದ ಹಳ್ಳಿಯೊಂದರಲ್ಲಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸಿದ ಘಟನೆಯನ್ನು ಓದಿ ಆಶ್ಚರ್ಯವಾಯಿತು ಎಂದರು.
ಬಸವಣ್ಣನ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿಗೂ ಪುರುಷರಷ್ಟೇ ಸಮಾನ ಸ್ಥಾನಮಾನ ನೀಡಲಾಗಿತ್ತು. ಆದರೆ ನವ ಪ್ರಜಾಪ್ರಭುತ್ವ ಯುಗದಲ್ಲಿ ಮಹಿಳೆಗೆ ಸಮಾನ ಅವಕಾಶ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಸವಣ್ಣ ಮೇಲ್ಜಾತಿಯಲ್ಲಿ ಜನಿಸಿದರೂ ಕೆಳಜಾತಿಯ ಜನರನ್ನು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಿದರು. ನಾನೊಬ್ಬ ಮಾದರ ಚನ್ನಯ್ಯನ ಮಗ ಎಂದು ನಿರ್ಭಿತಿಯಿಂದ ಹೇಳಿದರು. ಆದರೆ ದೇಶದಲ್ಲಿ ಇಂದಿಗೂ ಅಸ್ಪಶ್ಯತೆ ಆಚರಣೆ ನಿಂತಿಲ್ಲ. ಇದನ್ನು ತಡೆಗಟ್ಟಲು ಅನೇಕ ಕಾಯ್ದೆಗಳಿದ್ದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತ್ತಪಡಿಸಿದರು.
ಪರಿಷತ್ತಿನ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಮಾತನಾಡಿದರು. ಗದಗ ಜಿಲ್ಲಾಧ್ಯಕ್ಷ ವೀರನಗೌಡ ಮರಿಗೌಡ, ವಿಶ್ರಾಂತ ಅಧ್ಯಾಪಕ ದೇವಣ್ಣ ಹೊಸಕೋಟೆ, ಮುಖಂಡರಾದ ಮ.ಗು.ಸದಾನಂದಯ್ಯ, ಕೃಷ್ಣಪ್ಪ, ಡಾ.ಚಂದ್ರಶೇಖರಯ್ಯ, ಡಾ.ವಂದನಾ ರಮೇಶ್ ಜಿ.ರಂಗನಗೌಡ ಇತರರು ಇದ್ದರು.