ಅಸಮಾನತೆ ವಿರುದ್ಧ ಹೋರಾಡಿದ ನಾರಾಯಣಗುರು

31blrp2
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಮತ್ತು ಶಿವಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು.
Published on

ಬೇಲೂರು: ಸಮಾಜದಲ್ಲಿನ ಅನಿಷ್ಟ ಪದ್ಧತಿ, ಅಸಮಾನತೆ, ಶೋಷಣೆ ಮತ್ತು ಕಂದಾಚಾರಗಳ ವಿರುದ್ಧ ಹೋರಾಟ ನಡೆಸಿದ ಬ್ರಹ್ಮಶ್ರೀ ನಾರಾಯಣಗುರುಗಳು ಕರಾವಳಿ ಬಸವಣ್ಣ ಎಂದೇ ಹೆಸರಾಗಿದ್ದವರು ಎಂದು ಪುರಸಭೆ ಮಾಜಿ ಅಧ್ಯಕ್ಷ ಜಿ.ಶಾಂತಕುಮಾರ್ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಮತ್ತು ಶಿವಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾಜಿಕ ನ್ಯಾಯದ ರಾಜಕಾರಣಕ್ಕೆ ದಾರಿ ತೋರಿಸಬಲ್ಲ ಅನೇಕ ಯಶಸ್ವಿ ಚಿಂತನೆಗಳ ಮಾದರಿಗಳು ನಮ್ಮ ಮುಂದಿವೆ. ಇವರಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್, ರಾಮ ಮನೋಹರ ಲೋಹಿಯಾ ಚಿಂತನೆಯ ಬಗ್ಗೆ ಚರ್ಚೆ ನಡೆದಿವೆ. ರಾಜ್ಯದಲ್ಲಿ ಹೆಚ್ಚು ಚರ್ಚೆಗೊಳಗಾಗದ ಇನ್ನೊಂದು ಹೆಸರೇ ಕೇರಳದ ಸಮಾಜ ಸುಧಾರಕ ನಾರಾಯಣ ಗುರುಗಳು. ನಾವಿಂದು ಕಾಣುತ್ತಿರುವ ಪುರೋಗಾಮಿ ಮತ್ತು ಪ್ರಗತಿಗಾಮಿಗೆ ಕೇರಳದ ರೂವಾರಿ ನಾರಾಯಣ ಗುರುಗಳು ಕಾರಣ. ಅವರ ಪ್ರವೇಶಕ್ಕೆ ಮುನ್ನ ಹಿಂದು ಸಮಾಜದ ಸುಧಾರಣೆಯ ಪ್ರಯತ್ನದಲ್ಲಿದ್ದ ಸ್ವಾಮಿ ವಿವೇಕಾನಂದರೇ ಕೇರಳ ಒಂದು ಹುಚ್ಚಾಸ್ಪತ್ರೆ ಎಂದು ಕೈಚೆಲ್ಲಿ ಹೊರ ಹೋಗಿದ್ದರು. ಕೇರಳದಲ್ಲಿ ಜಾತಿ ವ್ಯವಸ್ಥೆ ಎಂಬುದು ಭೀಕರ ಮನೋರೋಗಿಗಳನ್ನು ಸೃಷ್ಟಿಸಿತ್ತು. ದೇವಸ್ಥಾನ ಪ್ರವೇಶ ಕುರಿತು ಮತ್ತು ಸಮಾಜದಲ್ಲಿನ ಅನಿಷ್ಟ ಪದ್ಧತಿ, ಅಸಮಾನತೆ ವಿರುದ್ಧ ಹೋರಾಟ ಮಾಡಿದ ಹೆಗ್ಗಳಿಕೆ ನಾರಾಯಣ ಗುರುಗಳಿಗೆ ಸಲ್ಲುತ್ತದೆ. ಅವರ ಸಂದೇಶ ಸಾರ್ವಕಾಲಿಕವಾಗಿದ್ದು, ಮನುಕುಲಕ್ಕೆ ಆದರ್ಶವಾಗಿದೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ ಮಾತನಾಡಿ, ಬಸವಣ್ಣ ಅವರ ಅನುಭವ ಮಂಟಪ ಸೇರಿದ ಚಂದಯ್ಯ ಕಾಯಕ ಸಮಾಜಕ್ಕೆ ತನ್ನದೆಯಾದ ಕಾಣಿಕೆ ನೀಡಿದ್ದಾರೆ. ಅವರ ವಚನ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆ ಎಂದರು.

ಶಿರಸ್ತೇದಾರ್ ರಂಗಸ್ವಾಮಿ, ದೈಹಿಕ ಶಿಕ್ಷಣ ಪರಿವೀಕ್ಷಕ ಪಾಲಾಕ್ಷಮೂರ್ತಿ, ಹಿಂದುಳಿದ ವರ್ಗಗಳ ಮುಖಂಡರಾದ ಮಂಜುನಾಥ, ಶಿವಪ್ಪ, ಚಂದ್ರಶೇಖರ, ತಾಪಂ ಇಒ ದಯಾನಂದ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net