ಅಸಮರ್ಪಕ ಕಾಮಗಾರಿ ಕಂಡು ಸಿಡಿಮಿಡಿ

h9-Basavaraj Hanumanth Nagar 1
Published on

ಹುಬ್ಬಳ್ಳಿ: ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಮಂಗಳವಾರ ಬೆಳ್ಳಂಬೆಳಗ್ಗೆ ನಗರ ಪ್ರದಕ್ಷಿಣೆ ಕೈಗೊಂಡು ಸ್ಮಾರ್ಟ್ ಸಿಟಿ, ಅಮೃತ್ ಯೋಜನೆ ಹಾಗೂ ಪಾಲಿಕೆ ಅನುದಾನದಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು. ಒಂದು ಕಡೆ ಕೆಲಸ ಸರಿಯಾಗಿಲ್ಲದ್ದರಿಂದ ಅಧಿಕಾರಿ ವಿರುದ್ಧ ಸಿಡಿಮಿಡಿಗೊಂಡು, ಎಚ್ಚರಿಕೆಯನ್ನೂ ನೀಡಿದರು.

ಮೊದಲಿಗೆ ನಿರ್ಮಾಣ ಹಂತದಲ್ಲಿರುವ ಉಣಕಲ್-ಹುಲಕೊಪ್ಪ ಹಾಗೂ ಹನುಮಂತ ನಗರ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದ್ದು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಳೆದ ವರ್ಷ ದಾಖಲೆ ಮಳೆಗೆ ಉಣಕಲ್ ಕೆರೆ ಕೋಡಿ ಹರಿದು ನಾಲಾ ಮೇಲಿನ ಈ ಎರಡು ಸೇತುವೆಗಳು ಸಂಪೂರ್ಣ ನೆಲಕಚ್ಚಿದ್ದವು.

ಬಳಿಕ ನ್ಯೂ ಕಾಟನ್ ಮಾರ್ಕೆಟ್ ಬಳಿಯ ಭಗತಸಿಂಗ್ ವೃತ್ತದಲ್ಲಿ ಗುತ್ತಿಗೆ ಪೌರ ಕಾರ್ವಿುಕರನ್ನು ಭೇಟಿ ಮಾಡಿದರು. ಬೆಳಗಿನ ಉಪಾಹಾರ ಸರಿಯಾಗಿ ಪೂರೈಕೆಯಾಗುತ್ತಿದೆಯೆ? ವೇತನ ಸಕಾಲಕ್ಕೆ ತಲುಪುತ್ತಿದೆಯೆ? ಎಂದು ವಿಚಾರಿಸಿದರು. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಅಗತ್ಯ ಸುರಕ್ಷಾ ಸಲಕರಣೆಗಳನ್ನು ಪೂರೈಸಲಾಗಿದೆಯೇ ಎಂದು ಕೇಳಿದರು.

ಕೇಶ್ವಾಪುರದ ಬೆಂಗೇರಿಯಲ್ಲಿ ಸ್ಥಾಪಿಸಲಾಗಿರುವ ಘನ ತ್ಯಾಜ್ಯ ವಿಲೇವಾರಿಯ ಸ್ಟೇಶನರಿ ಕಾಂಪ್ಯಾಕ್ಟರ್ ಸ್ಟೇಷನ್​ನ ಕಾರ್ಯನಿರ್ವಣೆಯನ್ನು ಸಚಿವರಿಗೆ ಅಧಿಕಾರಿಗಳು ವಿವರಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಬೆಂಗೇರಿ ಸಂತೆ ಮಾರುಕಟ್ಟೆ ಆಧುನೀಕರಣ, ಪಾಲಿಕೆ ಒಡೆತನದ ಈಜುಕೊಳದ 2ನೇ ಹಂತದ ಕಾಮಗಾರಿ, ಗೋಕುಲ ರಸ್ತೆ ರಾಮಲಿಂಗೇಶ್ವರ ನಗರ ಕೊಳಗೇರಿ ಪ್ರದೇಶದಲ್ಲಿ ಪೇವರ್ಸ್ ಅಳವಡಿಕೆ, ಘಂಟಿಕೇರಿಯಲ್ಲಿ ರಸ್ತೆ- ಗಟಾರ ನಿರ್ವಣ, ಸರ್ಕಾರಿ ಶಾಲೆ ನವೀಕರಣ ಕಾಮಗಾರಿಯನ್ನು ವೀಕ್ಷಿಸಿದ ಸಚಿವರು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಸ್ಮಾರ್ಟ್ ಸಿಟಿ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಮುಖ್ಯ ಇಂಜಿನಿಯರ್ ಎಂ. ನಾರಾಯಣ, ಕರ್ನಾಟಕ ಜಲ ಮಂಡಳಿ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಎಸ್. ರಾಜಗೋಪಾಲ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಎನ್.ಎಂ. ಕುಮ್ಮಣ್ಣವರ, ಪಾಲಿಕೆ ಉಪ ಆಯುಕ್ತ ಅಜೀಜ್ ದೇಸಾಯಿ, ಮತ್ತಿತರರು ಇದ್ದರು.

ಅಮಾನತು ಮಾಡುತ್ತೇನೆ..

ಘಂಟಿಕೇರಿ ಸರ್ಕಾರಿ ಶಾಲೆಯ ನವೀಕರಣ ಕಾಮಗಾರಿಯನ್ನು ಕಂಡು ಸಿಟ್ಟಾದ ಸಚಿವರು, ನಿಮ್ಮನ್ನು ಅಮಾನತು ಮಾಡಬೇಕಾದೀತು ಎಂದು ಸ್ಮಾರ್ಟ್ ಸಿಟಿ ಕಂಪನಿ ಎಇಇ ತಡಕೋಡ ಅವರನ್ನು ತರಾಟೆಗೆ ತೆಗೆದುಕೊಂಡರು.

ಶಾಲಾ ಕಟ್ಟಡದ ಗೋಡೆಯೊಳಗಿಂದ ಬೆಳೆದಿದ್ದ ಗಿಡವನ್ನು ಹಾಗೇ ಇಟ್ಟು ಸಿಮೆಂಟ್ ಪ್ಲಾಸ್ಟರ್ ಮಾಡಿ ಬಣ್ಣ ಹಚ್ಚಿದ್ದು ಸಚಿವರಿಗೆ ಕಾಣಿಸಿತ್ತು. ಜತೆಗೆ ಗೋಡೆಯ ಪ್ಲಾಸ್ಟರಿಂಗ್ ಕೆಲಸ ಸಹ ನುಣುಪಾಗಿ ಆಗಿರಲಿಲ್ಲ. ಇದರಿಂದ ಸಿಡಿಮಿಡಿಗೊಂಡ ಸಚಿವರು, ನೀವು ಹೀಗೇನಾ ಕೆಲಸ ಮಾಡುವುದು ಎಂದು ಖಾರವಾಗಿ ಪ್ರಶ್ನಿಸಿದರು. ಇವನ್ನೆಲ್ಲ ಸರಿಪಡಿಸದಿದ್ದರೆ ಅಮಾನತು ಮಾಡಲಾಗುವುದು ಎಂದು ಅಧಿಕಾರಿಗೆ ಎಚ್ಚರಿಕೆ ನೀಡಿದರು.

ಅಂಗಡಿಕಾರರಿಗೆ ಪುನರ್ವಸತಿ ಕಲ್ಪಿಸಿ

ಸ್ಮಾರ್ಟ್ ಸಿಟಿ ಯೋಜನೆಯಡಿ ಹುಬ್ಬಳ್ಳಿ ಜನತಾ ಬಜಾರ್, ಎಂ.ಜಿ. ಮಾರ್ಕೆಟ್ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ವಿಳಂಬವಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅಲ್ಲಿಯ ಅಂಗಡಿಕಾರರ ಮನವೊಲಿಸುವಂತೆ ಶಾಸಕರನ್ನು ಕೇಳಿದ್ದೇವೆ. ಹೊಸ ವಾಣಿಜ್ಯ ಸಂಕೀರ್ಣ ನಿರ್ವಣವಾಗುವವರೆಗೆ ಹಾಲಿ ಅಂಗಡಿಕಾರರಿಗೆ ಸೂಕ್ತ ಪುನರ್ವಸತಿ ಸ್ಥಳ ಗುರುತಿಸಿ ಸ್ಥಳಾಂತರಿಸುವಂತೆ ಪಾಲಿಕೆ ಆಯುಕ್ತರಿಗೆ ಹೇಳಿದ್ದೇವೆ ಎಂದು ಸಚಿವ ಬಿ.ಎ. ಬಸವರಾಜ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net